ಬೆಂಗಳೂರು: ಹೊಸಗುಡ್ಡದ ಹಳ್ಳಿಯ ಕೆಮಿಕಲ್ ಗೋದಾಮು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಫ್ಯಾಕ್ಟರಿ ಮಾಲೀಕರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಶಂಭುಲಿಂಗ ಎಂಬುವರು ದೂರು ನೀಡಿದ ಕಾರಣ ಮತ್ತೊಂದು ಎಫ್ಐಆರ್ ದಾಖಲಾಗಿದ್ದು, ಸದ್ಯ ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸರು Explosive substances act ಅಡಿ ಐಪಿಸಿ ಸೆಕ್ಷನ್ 427, 338, 285ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಶಂಭುಲಿಂಗ ಎಂಬುವರು ಕೆಲಸದ ನಿಮಿತ್ತ ಹೊಸಗುಡ್ಡದ ಹಳ್ಳಿ ಬಳಿ ತೆರಳಿ ಟೀ ಕುಡಿದು ಬರುವಷ್ಟರಲ್ಲಿ ಅವರ ಲಗೇಜ್ ಟೆಂಪೋಗೆ ಬೆಂಕಿ ಹತ್ತಿದೆ. ಹೀಗಾಗಿ ಫ್ಯಾಕ್ಟರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಇದೇ ರೀತಿ ಉಳಿದ 5 ಕಾರ್ ಹಾಗೂ 2 ಬೈಕ್ಗಳು ಸಹ ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಭಸ್ಮವಾಗಿರುವ ವಿಚಾರ ಬಯಲಿಗೆ ಬಂದಿದೆ. ಮತ್ತಷ್ಟು ದೂರುಗಳು ಈ ಕಂಪನಿ ವಿರುದ್ಧ ದಾಖಲಾಗುವ ಸಾಧ್ಯತೆ ಇದೆ. ಸದ್ಯ ಶಂಕರಪುರಂನ ಶಂಕರ ಪಾರ್ಕ್ ನಿವಾಸ ಬಳಿ ಕಂಪನಿ ಮಾಲೀಕ ಸಜ್ಜನ್ ರಾಜ್, ಪತ್ನಿ ಕಮಲಾ ಹಾಗೂ ಪುತ್ರ ಅನಿಲ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ತನಿಖೆ ವೇಳೆ ಬಿಬಿಎಂಪಿ, ಫೈರ್ & ಎಮರ್ಜೆನ್ಸಿ ಸರ್ವೀಸ್ ಹಾಗೂ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅನುಮತಿ ಇಲ್ಲದೆ ಈ ಗೋದಾಮು ಕಾರ್ಯ ನಿರ್ವಹಣೆ ಮಾಡಿರುವುದು ಬೆಳಕಿಗೆ ಬಂದಿದ್ದು, ತನಿಖೆ ಮುಂದುವರೆದಿದೆ.