ಬೆಂಗಳೂರು: ರಾಜ್ಯದ ಮೊದಲ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದ್ದ ಟೆಕ್ಕಿಯ ಸಹೋದ್ಯೋಗಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮೃತ ವ್ಯಕ್ತಿ ಸೇರಿ ಸೋಂಕಿತರ ಸಂಖ್ಯೆ ಒಟ್ಟು 8ಕ್ಕೆ ಏರಿಕೆಯಾಗಿದೆ.
ಮೊದಲ ಕೇಸ್ ಟೆಕ್ಕಿಯಲ್ಲಿ ಕಂಡುಬಂದ ನಂತರ ಅವರ ಪತ್ನಿ, ಪುತ್ರಿ ಹಾಗೂ ಡ್ರೈವರ್ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿತ್ತು. ಇಂದು ಆ ಟೆಕ್ಕಿಯ ಜೊತೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಹೋದ್ಯೋಗಿಯಲ್ಲೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. 32 ವರ್ಷದ ಟೆಕ್ಕಿಗೆ ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ರಿಂದ ಮಾಹಿತಿ:
ಅಮೆರಿಕದಿಂದ ಬಂದಿದ್ದ ಟೆಕ್ಕಿಯ ಸಹೋದ್ಯೋಗಿ ಟೆಕ್ಕಿಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರನ್ನು ಈಗಾಗಲೇ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ, ನಂತರ ಆಸ್ಪತ್ರೆಗೆ ಸೇರಿಸಿ ಐಸೋಲೇಷನ್ನಲ್ಲಿ ಇರಿಸಲಾಗಿತ್ತು. ಈಗ ಪಾಸಿಟಿವ್ ವರದಿ ಬಂದ ಕಾರಣ ಅವರ ಪತ್ನಿ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್ ಗುರುತಿಸಿ ಅವರನ್ನ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಸಂಪೂರ್ಣ ವಿವರ ನಾಳೆ ನೀಡಲಿದ್ದೇವೆ ಎಂದರು.
ಅಮೆರಿಕದಿಂದ ವಾಪಸಾದ ಟೆಕ್ಕಿ, ಅವರ ಪತ್ನಿ, ಪುತ್ರಿ, ಚಾಲಕ, ಕಲಬುರಗಿ ವೃದ್ಧ, ಗ್ರೀಸ್ನಿಂದ ಬಂದ ವ್ಯಕ್ತಿ, ವೃದ್ಧನ ಪುತ್ರಿ ಇಲ್ಲಿಯವರೆಗೆ ಕೊರೊನಾ ಸೋಂಕಿಗೆ ಸಿಲುಕಿದ್ದು, ಅಮೆರಿಕದಿಂದ ಮರಳಿದ್ದ ಟೆಕ್ಕಿಯ ಸಹೋದ್ಯೋಗಿಯಲ್ಲಿ ಇಂದು ಹೊಸದಾಗಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಕಲಬುರಗಿಯ ವೃದ್ಧ ಮೃತಪಟ್ಟಿದ್ದು, ಇತರ ಏಳು ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಅಚರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ 14 ದಿನಗಳಲ್ಲಿ ವಿದೇಶದಿಂದ ಬಂದ ಒಟ್ಟು 42 ಸಾವಿರ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಸೆಲ್ಫ್ ಡಿಕ್ಲರೇಷನ್ನಲ್ಲಿ ಅವರು ತಮ್ಮ ಮಾಹಿತಿ ನೀಡಿರುತ್ತಾರೆ. ಅವರಿಗೆ ನಾವು ಕರೆ ಮಾಡಿ ಅವರ ಆರೋಗ್ಯದ ಮಾಹಿತಿ ಪಡೆದಿದ್ದೇವೆ. ಬೆಂಗಳೂರಿನಲ್ಲಿ 17 ಸರ್ಕಾರಿ ಮತ್ತು 35 ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಮಾರ್ಗದರ್ಶನದ ವ್ಯವಸ್ಥೆ ಮಾಡಲಾಗಿದೆ. 104ಕ್ಕೆ ಕರೆ ಮಾಡಿದರೆ ಯಾವ ಆಸ್ಪತ್ರೆಗೆ ಹೋಗಬೇಕು ಎಂದು ತಿಳಿಸಲಾಗುತ್ತದೆ ಎಂದರು.