ಬೆಂಗಳೂರು : ನೈಜೀರಿಯಾ ಪ್ರಜೆಯೊಂದಿಗೆ ನಿಕಟ ಸಂಪರ್ಕ ಹೊಂದಿದ ಆರೋಪ ಪ್ರಕರಣದಲ್ಲಿ ಇತ್ತೀಚೆಗಷ್ಟೆ ರೂಪದರ್ಶಿ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ್ದ ಸುಳಿವಿನ ಮೇರೆಗೆ ಮತ್ತೋರ್ವ ಆರೋಪಿಯನ್ನು ಗೋವಿಂದಪುರ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತರಿಂದ ಸಿಕ್ಕ ಸುಳಿವು : ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪದಡಿ ಇತ್ತೀಚೆಗೆ ಮೂವರ ಮನೆಗಳ ಮೇಲೆ ದಾಳಿ ನಡೆಸಿ ರೂಪದರ್ಶಿ ಸೋನಿಯಾ ಅಗರವಾಲ್, ಈಕೆಯ ಸ್ನೇಹಿತ ದಿಲೀಪ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಈ ವೇಳೆ ಸಿಕ್ಕ ಸುಳಿವಿನ ಆಧಾರದ ಮೇಲೆ ಇಂದು ಬಿಟಿಎಂ ಲೇಔಟ್ನಲ್ಲಿ ವಾಸವಾಗಿದ್ದ ಖಾದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಈತನ ಬಳಿ ದೊರೆತ ಎಕ್ಸ್ಟೆನ್ಸಿ ಮಾತ್ರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಫುಡ್ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಸರಬರಾಜು : ಕಾಸ್ಮೆಟಿಕ್ ವ್ಯವಹಾರ ನಡೆಸುತ್ತಿದ್ದ ರೂಪದರ್ಶಿ ಸೋನಿಯಾ ಮತ್ತು ಈಕೆಯ ಗೆಳೆಯ ದಿಲೀಪ್ ಎಂಬುವರು ಕೇರಳ ಮೂಲದ ಅಬ್ದುಲ್ ಖಾದರ್ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಯಾರಿಗೂ ಅನುಮಾನ ಬರದಿರಲು ಖಾದರ್, ಡೆನ್ಜೋ ಫುಡ್ ಡೆಲಿವರಿ ಮಾಡುವ ಸೋಗಿನಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ.
ಡ್ರಗ್ಸ್ ಆರ್ಡರ್ಗೆ ವಾಟ್ಸ್ಆ್ಯಪ್ ಸ್ಮೈಲಿ ಬಳಕೆ : ಡ್ರಗ್ಸ್ ಸರಬರಾಜು ಮಾಡಲು ಯಾರಿಗೂ ತಿಳಿಯಬಾರದೆಂಬ ಉದ್ದೇಶಕ್ಕೆ ಇವರು, ವಾಟ್ಸ್ಆ್ಯಪ್ನಲ್ಲಿ ಸ್ಮೈಲಿಗಳನ್ನು ಕೋಡ್ವರ್ಡ್ಗಳಾಗಿ ಬಳಸಿಕೊಳ್ಳುತ್ತಿದ್ದರು. ಹೀಗೆ ಡ್ರಗ್ಸ್ ಬೇಕಿರುವವರು ಈತನಿಗೆ ವಾಟ್ಸ್ಆ್ಯಪ್ನಲ್ಲಿ ಸ್ಮೈಲಿ ಕಳುಹಿಸಿದರೆ ಅವರರಿಗೆ ಮಾದಕ ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ.
ಶರ್ಟ್, ಪ್ಯಾಂಟ್ಗಳಲ್ಲಿ ಮಾದಕವಸ್ತು ಸಾಗಾಟ : ಜೊತೆಗೆ ಬಟ್ಟೆ ಅಂಗಡಿಗಳಿಗೆ ಹೋಗಿ ಕಡಿಮೆ ದರದಲ್ಲಿ ಶರ್ಟ್ ಮತ್ತು ಪ್ಯಾಂಟ್ ಖರೀದಿಸಿ ಇದನ್ನು ಸಾಗಾಟ ಮಾಡುವ ಸೋಗಿನಲ್ಲಿ ಶರ್ಟ್ನ ತೋಳಿನ ಭಾಗ, ಪ್ಯಾಂಟ್ನ ಕಾಲಿನ ಭಾಗದಲ್ಲಿ ಡ್ರಗ್ಸ್ ಇಟ್ಟು ಕಳುಹಿಸುತ್ತಿದ್ದ.
High end ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು : ಖಾದರ್, ಅಪರಿಚಿತರಿಂದ ಡ್ರಗ್ಸ್ ಖರೀದಿಸಿ High end ಪಾರ್ಟಿಗಳಲ್ಲಿ ಸರಬರಾಜು ಮಾಡುತ್ತಿದ್ದ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಓದಿ: ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಆರೋಪ: ರೂಪದರ್ಶಿ ಸೇರಿ ಇಬ್ಬರು ಅರೆಸ್ಟ್