ಬೆಂಗಳೂರು: ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸವಿಟ್ಟು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಘೋಷಣೆ ಮಾಡಿರುವ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಮ್ಮ ಹೇಳಿಕೆಯೇ ಮುಳುವಾಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮೈಸೂರು ಜಿಲ್ಲೆಯ ವರುಣ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಬಹುದು ಎಂದು ದೊಡ್ಡದಾಗಿ ನಿರೀಕ್ಷಿಸಲಾಗಿತ್ತು. ಬಾಗಲಕೋಟೆ ಜಿಲ್ಲೆಯ ಬದಾಮಿಯಿಂದ ಸ್ಪರ್ಧಿಸುವ ಒತ್ತಡಕ್ಕೆ ಮಣಿಯದೇ ಆ ಭಾಗದ ಕಾಂಗ್ರೆಸ್ ಮತದಾರರ ಬೇಸರಕ್ಕೆ ಗುರಿಯಾಗಿದ್ದ ಸಿದ್ದರಾಮಯ್ಯ ತಮ್ಮ ನೆಲದ ಜಿಲ್ಲೆಯ ಜನರನ್ನು ನಿರಾಸೆಗೊಳಿಸುವುದಿಲ್ಲ, ಮೈಸೂರಿನ ವರುಣದಿಂದಲೇ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು.
ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಡ ಬರುತ್ತಿತ್ತಾದರೂ, ಗೆಲುವಿನ ಸಾಧ್ಯತೆ, ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲೇ ಇರುವ ಹಿತಶತ್ರುಗಳ ತಂತ್ರಗಾರಿಕೆಗೆ ಅವಕಾಶ ನೀಡದಂತೆ ತಮ್ಮನ್ನು ಕಾಪಾಡಿಕೊಳ್ಳುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಸಿದ್ದರಾಮಯ್ಯಗೆ ಸುರಕ್ಷಿತ ಕ್ಷೇತ್ರ ವರುಣಾ ಎಂದು ಹೇಳಿಕೊಳ್ಳಲಾಗಿತ್ತು. ಆದರೆ ಅವರು ತಾವು ಕೋಲಾರದಿಂದ ಕಣಕ್ಕಿಳಿಯುವುದಾಗಿ ಹೇಳಿ ಅಚ್ಚರಿ ಮೂಡಿಸಿದರು. ಇದಾದ ಬಳಿಕ ಕೋಲಾರ ಒಂದರಿಂದಲೇ ಸ್ಪರ್ಧಿಸುವ ಮಾತಾಡಿ ಇನ್ನಷ್ಟು ಅಚ್ಚರಿ ಮೂಡಿಸಿದ್ದಾರೆ. ಎರಡು ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರೆ, ಅದರಲ್ಲಿ ಒಂದು ವರುಣಾ ಪಕ್ಕಾ ಎಂದು ಹೇಳಲಾಗಿತ್ತು. ಆದರೆ ಇದೀಗ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದವರಿಗೆ ಮಾತ್ರವಲ್ಲ, ಹಳೆ ಮೈಸೂರು ಭಾಗದ ಕಾಂಗ್ರೆಸ್ ನಾಯಕರಿಗೂ ನಿರಾಸೆ ಉಂಟುಮಾಡಿದ್ದಾರೆ. ಬಯಲುಸೀಮೆಯಲ್ಲಿ ಭವಿಷ್ಯ ಹುಡುಕಿ ಹೊರಟಿದ್ದಾರೆ.
ಸ್ಪಷ್ಟ ಉತ್ತರ: ‘ಯಾರು ಏನೇ ಹೇಳಿದರೂ ನಾನು ಚುನಾವಣೆಗೆ ಒಂದೇ ಕ್ಷೇತ್ರದಿಂದ ಸ್ಪರ್ಧಿಸುವುದು’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 3 ಕ್ಷೇತ್ರಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇನೆ, ಅದರಲ್ಲಿ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಆದರೆ ಅವರ ಚಿತ್ತ ಹಾಗೂ ಭರವಸೆ ಕೋಲಾರವಾಗಿದೆ ಎಂಬ ಮಾತಿದೆ. ಸಿದ್ದರಾಮಯ್ಯ ವರುಣದಲ್ಲಿ ಸ್ಪರ್ಧೆ ಮಾಡಿದ್ದಿದ್ದರೆ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ಸಂಚಲನ ಸೃಷ್ಟಿಯಾಗುತ್ತಿತ್ತು. ಇಲ್ಲಿಯೇ ಸ್ಪರ್ಧೆ ಮಾಡ್ತಾರೆ ಎಂದು ಕಾರ್ಯಕರ್ತರು ಸಹ ನಂಬಿದ್ದರು.
ಆದರೆ ಈಗ ಎಲ್ಲವೂ ಉಲ್ಟಾ ಆಗಿದ್ದು, ಕಾರ್ಯಕರ್ತರು ಒಂದು ರೀತಿ ನಿರಾಸೆ ಮನೋಭಾವಕ್ಕೆ ಶರಣಾಗಿದ್ದಾರೆ. ತಮ್ಮ ಪುತ್ರನ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ವರುಣದಿಂದ ದೂರ ಸರಿದಿದ್ದಾರೆ ಎಂಬ ಮಾತಿದೆ. ಆದರೆ ತಮ್ಮ ರಾಜಕೀಯ ಬದುಕಿನ ಕಡೆಯ ಚುನಾವಣೆಯನ್ನು ಗೆಲ್ಲಲೇಬೇಕೆಂದಾದರೆ ಅವರು ಕಡೆಯ ಕ್ಷಣದವರೆಗೂ ವರುಣವನ್ನು ಆಯ್ಕೆಯ ವಿಚಾರವಾಗಿ ಇರಿಸಿಕೊಳ್ಳಲಿದ್ದಾರೆ. ಕೋಲಾರ ಸ್ಪರ್ಧೆ ಘೋಷಣೆ ತಮ್ಮ ವೈರಿಗಳ ದಿಕ್ಕು ತಪ್ಪಿಸುವ ಸಿದ್ದರಾಮಯ್ಯ ರಾಜಕೀಯ ತಂತ್ರಗಾರಿಕೆ ಎಂದು ಸಹ ಹೇಳಲಾಗುತ್ತಿದೆ.
ಮನೆ ದೇವರ ಭವಿಷ್ಯ: ಅಂದಹಾಗೆ ಮಂಡ್ಯದಲ್ಲಿ ಮನೆ ದೇವರಿಗೆ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಪೂಜೆ ಸಲ್ಲಿಸಿದ ವೇಳೆ ಸಿದ್ದರಾಮಯ್ಯ ಒಂದೇ ಕಡೆ ಚುನಾವಣೆಗೆ ಸ್ಪರ್ಧಿಸಿದರೆ ಬಲವಿಲ್ಲ, ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಮನೆ ದೇವರು ಚಿಕ್ಕಮ್ಮ ತಾಯಿ ಸೂಚನೆ ನೀಡಿದ್ದಾಳೆ. ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ತಾಯಿ ದೇವಾಲಯದಲ್ಲಿ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಈ ರೀತಿ ಬಂದಿದೆ. ದೇವರ ಗುಡ್ಡಪ್ಪನ ಮೈಮೇಲೆ ಬಂದಿದ್ದ ಚಿಕ್ಕಮ್ಮ ತಾಯಿ ದೇವಿಯಿಂದ ಎರಡು ಕಡೆ ನಿಲ್ಲುವಂತೆ ಸಿದ್ದರಾಮಯ್ಯ ಪುತ್ರನಿಗೆ ಸೂಚನೆ ನೀಡಿದ್ದಾರೆ. ದೇಗುಲದ ಅರ್ಚಕ ಲಿಂಗಣ್ಣನ ಮೇಲೆ ಆವಾಹನೆಯಾಗಿದ್ದ ಶಕ್ತಿ ದೇವತೆ, ಒಂದೇ ಕಡೆ ನಿಂತ್ರೆ ಗೆಲುವು ಕಷ್ಟ ಪ್ರಬಲ ಶಕ್ತಿಗಳ ವಿರೋಧವಿದೆ. ಎರಡು ಕಡೆ ಬಾಹುಬಲ ಚಾಚಬೇಕು ಎರಡು ಭುಜಬಲದಲ್ಲಿ ನಿಲ್ಲಬೇಕು. ಪ್ರತಿ ವರ್ಷ ಬಂದು ನನ್ನ ದರ್ಶನ ಪಡೆಯಬೇಕು. ಒಂದೇ ಕಡೆ ಸಿದ್ದರಾಮಯ್ಯ ನಿಂತರೆ ರಾಜಕೀಯ ಭವಿಷ್ಯಕ್ಕೆ ಕುತ್ತು ಎಂದು ನುಡಿದಿದೆ. ಇದಾದ ಬಳಿಕ ಸಿದ್ದರಾಮಯ್ಯ ನಿರ್ಧಾರ ಬದಲಾಗುವುದಾ ಎನ್ನುವುದನ್ನು ಕಾದು ನೋಡಬೇಕಿದೆ.
ಯಾರ್ಯಾರು ಏನೇನಂತಾರೆ?: ಕೋಲಾರ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಸೇಫ್ ಕ್ಷೇತ್ರವಲ್ಲ. ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧೆ ಮಾಡಿದರೆ, ಹರಕೆಯ ಕುರಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಎರಡಲ್ಲ, 25 ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆಲ್ಲಲ್ಲ. ಅವರನ್ನು ಎಲ್ಲಿ ನಿಂತರೂ ಜನ ಸೋಲಿಸುತ್ತಾರೆ ಎಂದಿದ್ದಾರೆ.
ಮಾಜಿ ಸಚಿವ ರಾಮಲಿಂಗರೆಡ್ಡಿ, ಸಿದ್ದರಾಮಯ್ಯ ನಮ್ಮ ನಾಯಕರು. 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ನಿಲ್ಲಬಹುದು. ಸಿದ್ದರಾಮಯ್ಯರನ್ನು ಹರಕೆಯ ಕುರಿ ಮಾಡ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯವರಿಗೆ ಏಕೆ ನಮ್ಮ ವಿಚಾರ. ಮೊದಲು ತಮ್ಮ ಮನೆಯಲ್ಲಿ ಏನ್ ಆಗ್ತಾ ಇದೆ ಅನ್ನೋದನ್ನ ನೋಡ್ಕೊಳ್ಳಲಿ ಎಂದಿದ್ದಾರೆ. ವಿಧಾನ ಪರಿಷತ್ ಪ್ರತಿ ಪಕ್ಷದ ಮಾಜಿ ನಾಯಕ ಎಸ್.ಆರ್. ಪಾಟೀಲ್, ಕೋಲಾರ ಸೇರಿದಂತೆ ಹಲವು ಕಡೆ ಸಿದ್ದರಾಮಯ್ಯ ಸ್ಫರ್ಧೆಗೆ ಒತ್ತಾಯ ಇದೆ. ಬಾದಾಮಿಯಲ್ಲಿ ಒತ್ತಾಯ ಇದೆ. ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ, ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ನಿಲ್ತೇನೆ ಅಂತ. ಬಾಗಲಕೋಟೆ ನಾಯಕನಾಗಿ ನಾನು ಬಾದಾಮಿಗೆ ಕರೆಯುತ್ತಿದ್ದೇನೆ. ಸಿದ್ದರಾಮಯ್ಯ ಏನ್ ನಿರ್ಧಾರ ಮಾಡ್ತಾರೆ ಅಂತ ನೋಡಬೇಕು ಎಂದು ಹೇಳಿದ್ದಾರೆ.
ಒಟ್ಟಾರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಕಳೆದ ವಾರ ಚಾಮರಾಜಪೇಟೆಯಲ್ಲಿಯೂ ಓಡಾಡಿ, ಜೆಡಿಎಸ್, ಬಿಜೆಪಿ ಜತೆ ಗುರುತಿಸಿಕೊಂಡಿರುವ ನಾಯಕರ ಜತೆ ಸಮಾಲೋಚಿಸಿದ್ದಾರೆ. ಅಂತಿಮವಾಗಿ ತಾವು ಸೂಚಿಸಿದ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿಸಲಿದೆ ಎಂದಿರುವ ಅವರು, ಕೋಲಾರವನ್ನು ನೆಪವಾಗಿ ಮುಂದಿಟ್ಟಿದ್ದಾರಾ ಅಥವಾ ಅಲ್ಲಿಂದಲೇ ಸ್ಪರ್ಧಿಸುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಎಂ ಬಿ ಪಾಟೀಲ್ ಕೈ ಇನ್ನಷ್ಟು ಬಲಪಡಿಸಿದ ಹೈಕಮಾಂಡ್: ಪ್ರಚಾರ ಸಮಿತಿಗೆ ಇನ್ನಷ್ಟು ನಾಯಕರ ನೇಮಕ