ಬೆಂಗಳೂರು: ಸಾವಿರ ರೂಪಾಯಿ ನೀಡಲು ನಿರಾಕರಿಸಿದ ಗಂಡನ ಮೇಲೆ ಹೆಂಡತಿ ಹಾಗೂ ಆಕೆಯ ಮನೆಯವರು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಆರೋಪ ಪ್ರಕರಣ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೀಫ್ (24) ಬೆಂಕಿಯಿಂದ ಗಾಯಗೊಂಡಿರುವ ವ್ಯಕ್ತಿಯಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಅಮ್ರಿನ್ ಬಾನು ಎನ್ನುವ ಯುವತಿಯಿಂದಿಗೆ ಮದುವೆ ಆಗಿದ್ದ. ವಿವಾಹದ ಬಳಿಕ ಆರೀಫ್ ಅತ್ತೆ ಮನೆಯಲ್ಲಿ ವಾಸವಾಗಿದ್ದ. ಇತ್ತೀಚೆಗಷ್ಟೇ ಬೇರೆ ಏರಿಯಾದಲ್ಲಿ ಹೊಸದಾಗಿ ಮನೆ ಮಾಡಿದ್ದ ಆರೀಫ್ ಮನೆಗೆ ಬಣ್ಣ ಬಳಿಯಲು 2 ಸಾವಿರ ರೂ. ಇಟ್ಟುಕೊಂಡಿದ್ದನಂತೆ. ಈ ಹಣ ಇರುವುದನ್ನು ಅರಿತ ಆತನ ಪತ್ನಿ ಅಮ್ರಿನಾ ಬಾನು ಸಾವಿರ ರೂಪಾಯಿ ನೀಡುವಂತೆ ಕೇಳಿದ್ದಾಳೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಮನೆಯಲ್ಲಿದ್ದ ಸೀಮೆಎಣ್ಣೆ ಸುರಿದುಕೊಂಡು ಸಾಯುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯಿಂದ ಸೀಮೆಎಣ್ಣೆ ಕ್ಯಾನ್ ಕಸಿದುಕೊಂಡು ತಾನೇ ಸಾಯುವುದಾಗಿ ಆರೀಫ್ ಹೇಳಿದ್ದಾನೆ. ಈ ವೇಳೆ ಆತನ ಪತ್ನಿಯು ತನ್ನ ತಾಯಿ ಜೊತೆ ಸೇರಿ ಗಂಡನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಕಿ ಹಚ್ಚಿದ್ದರಿಂದ ಎದೆ, ಕೈ ಹಾಗೂ ಭುಜಗಳಿಗೆ ಗಾಯವಾಗಿದ್ದರಿಂದ ನೋವು ತಾಳಲಾರದೆ ಆರೀಫ್ ಕಿರುಚಾಡಿದ್ದಾನೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಕಾರಣರಾದ ಹೆಂಡತಿ ಅಮ್ರಿನ್ ಬಾನು, ಅತ್ತೆ ಫರು ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.