ಬೆಂಗಳೂರು: ರಾಜ್ಯಾದ್ಯಂತ ಅಂಗನವಾಡಿ ಬಂದ್ ಮಾಡಿ ಎಐಟಿಯುಸಿ ಸಂಘಟನೆಯಿಂದ ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಬೃಹತ್ ನಿರಶನ ನಡೆಸಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಜಮಾಯಿಸುವ ಸಾಧ್ಯತೆ ಇದೆ. ಇನ್ನು ಮೈಸೂರು ಬ್ಯಾಂಕ್ ವೃತ್ತದಲ್ಲಿ ಬ್ಯಾಂಕ್ ನೌಕರರ ಪ್ರತಿಭಟನೆ ನಡೆಯಲಿದ್ದು, ಎರಡು ಪ್ರಮುಖ ಜಂಕ್ಷನ್ಗಳಲ್ಲಿ ಪ್ರತಿಭಟನೆಯ ಬಿಸಿ ಸಾರ್ವಜನಿಕರಿಗೆ ತಟ್ಟಲಿದೆ.
ಈ ಹಿಂದೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಫೆಬ್ರವರಿ 2 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಬೇಡಿಕೆಗಳನ್ನು ಈಡೆರಿಸುವ ಭರವಸೆಯನ್ನು ಅವತ್ತು ಸಚಿವರು ಮತ್ತು ಅಧಿಕಾರಿಗಳು ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಈ ಹಿನ್ನೆಲೆ ನಿರಾಸೆಯಾಗಿದೆ ಎಂದು ಎಐಟಿಯುಸಿ ಸಂಘಟನೆ ತಿಳಿಸಿದೆ.
ಇದು ಮಹಿಳಾ ವಿರೋಧಿ ಬಜೆಟ್ ಎಂದು ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ, ಪಿಂಚಣಿ, ನಿವೃತ್ತಿಯಾದವರಿಗೆ ಇಡಿಗಂಟು, ಇಎಸ್ಐ, ಭವಿಷ್ಯ ನಿಧಿ ಸೌಲಭ್ಯಗಳು ಎಂಬ ಪ್ರಮುಖ ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟಿದ್ದಾರೆ.