ಆನೇಕಲ್(ಬೆಂಗಳೂರು): ಪತಿಯ ಕಿರುಕುಳಕ್ಕೆ ಬೇಸತ್ತು ಆತನನ್ನು ಕೊಲೆ ಮಾಡಿ ಸಾಕ್ಷಿ ಬಿಡದೆ ಪರಾರಿಯಾಗಿದ್ದ ಪತ್ನಿಯನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 28ರಂದು ಅಪರಿಚಿತ ಶವವೊಂದು ಆನೇಕಲ್ ದೊಡ್ಡ ಕರೆಯಲ್ಲಿ ಪತ್ತೆಯಾಗಿತ್ತು. ಮದ್ಯದ ಪಾಕೆಟ್, ಮದ್ಯ ತುಂಬಿದ ಪ್ಲಾಸ್ಟಿಕ್ ಲೋಟದೊಂದಿಗೆ ಅರೆನಗ್ನವಾಗಿ ರಕ್ತಸಿಕ್ತವಾಗಿ ಬಿದ್ದಿದ್ದ ಶವವನ್ನು ಕಂಡ ಸ್ಥಳೀಯರು ತಕ್ಷಣ ಆನೇಕಲ್ ಪೊಲೀಸರಿಗೆ ತಿಳಿಸಿದ್ದರು.
ಮೃತದೇಹದ ಕತ್ತಿನ ಹಿಂಭಾಗ, ಬೆರಳಿನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಗಾಯಗಳಿದ್ದವು. ಸ್ಥಳಕ್ಕೆ ಬಂದ ಎಸ್ಐ ಸಂತೋಷ್, ಸಿಐ ಕೃಷ್ಣ, ಮತ್ತಿತರ ಪೊಲೀಸ್ ಸಿಬ್ಬಂದಿಗೆ ಶವದ ಗುರುತು ಸಿಗದೆ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅನಂತರ ಪಿಸಿ ಬಾಲಾಜಿ ಮತ್ತು ಈಶ್ವರ್ ನಡೆಸಿದ ತನಿಖೆಯಲ್ಲಿ ಮದ್ಯದ ಟೆಟ್ರಾ ಪ್ಯಾಕ್ ಮೇಲಿನ ಸಂಖ್ಯೆಯನ್ನು ಪರಿಶೀಲಿಸಿ ಬಾರ್ಗಳ ಬಾಗಿಲಿಗೆ ಎಡತಾಕಿದಾಗ ಬನ್ನೇರುಘಟ್ಟ-ಬೆಂಗಳೂರು ರಸ್ತೆಯ ಬಸವನಪುರ ಬಾರ್ನ ಸಿಸಿಟಿವಿ ಕ್ಯಾಮರಾದಲ್ಲಿ ಟೆಟ್ರಾ ಪ್ಯಾಕ್ ಕೊಂಡ ವ್ಯಕ್ತಿ ಯಾರೆಂದು ಗೊತ್ತಾಗಿದೆ. ಆಗಲೇ ಕೊಲೆಯಾದ ವ್ಯಕ್ತಿ 38 ವರ್ಷದ ಶಿವರಾಜ್ ಎಂದು ತಿಳಿದು ಬಂದಿದೆ.
ಶಿವರಾಜ್ ಮೂಲತಃ ರಾಯಚೂರು ಜಿಲ್ಲೆಯವನಾಗಿದ್ದು, ಎರಡನೇ ಮದುವೆಯಾಗಿದ್ದ ಈತನಿಗೆ ಮೂವರು ಮಕ್ಕಳಿದ್ದಾರೆ. ಈತನ ಮೊದಲ ಪತ್ನಿಗೂ ಮೂವರು ಮಕ್ಕಳಿದ್ದಾರೆ. ಕಾರಣಾಂತರದಿಂದ ಬೆಂಗಳೂರಿಗೆ ಬಂದು ನೆಲೆಸಿ ಗಾರೆ ಕೆಲಸ ಮಾಡುತ್ತಿದ್ದ ಈತ ಮಲ್ಲಮ್ಮಳನ್ನು ಮದುವೆಯಾಗಿದ್ದ. ಕಳೆದ ತಿಂಗಳು ಗಂಡನಿಂದಾಗುತ್ತಿದ್ದ ದೈಹಿಕ ಹಿಂಸೆ ತಾಳಲಾರದೆ ಬೇಸೆತ್ತು ಹೊಸ ಮಚ್ಚನ್ನು ಕೊಂಡು ಆತನನ್ನು ಆನೇಕಲ್ ದೊಡ್ಡಕೆರೆಗೆ ಕರೆತಂದಿದ್ದಳು. ಬೆಳಗ್ಗೆಯಿಂದಲೇ ಕೆರೆಯ ಬಳಿ ಗಂಡ ಮಕ್ಕಳೊಂದಿಗಿದ್ದ ಈಕೆ ಮಧ್ಯಾಹ್ನದ ವೇಳೆಗೆ ಗಂಡನಿಗೆ ಕಂಠಪೂರ್ತಿ ಕುಡಿಸಿ ಮಕ್ಕಳ ಎದುರೇ ಮಚ್ಚಿನಿಂದ ಕೊಂದು ಸುಳಿವೂ ಸಿಗದಂತೆ ಪರಾರಿಯಾಗಿದ್ದಳು.
ನಂತರ ಬಾರ್ನಲ್ಲಿ ವಿಳಾಸ ಪಡೆದು ಬಾಡಿಗೆ ಮನೆಯ ಬಳಿಗೆ ಪೊಲೀಸರು ಹೋದಾಗ ಮನೆ ಬೀಗ ಹಾಕಿತ್ತು. ಅನಂತರ ತೀವ್ರ ಪತ್ತೆ ಕಾರ್ಯ ನಡೆಸಿದ ಪೊಲೀಸರ ಕೈಗೆ ಮಲ್ಲಮ್ಮ ಸಿಕ್ಕಿಬಿದ್ದಿದ್ದು, ತನಿಖೆಗೊಳಪಡಿಸಿ ಜೈಲಿಗೆ ಕಳಿಹಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.