ಬೆಂಗಳೂರು: ಜಿಂದಾಲ್ಗೆ ಭೂಮಿ ಪರಾಭಾರೆ ಮಾಡುವ ಸಂಬಂಧ ಸಚಿವ ಸಂಪುಟ ಉಪ ಸಮಿತಿಯು ಎಲ್ಲಾ ರೀತಿಯಿಂದಲೂ ಪರ್ಯಾಲೋಚಿಸಿ ತೀರ್ಮಾನ ಪ್ರಕಟಿಸಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಶಾಸಕ ಆನಂದ್ ಸಿಂಗ್ 7 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ.
ಈಗಾಗಲೇ 11 ಸಾವಿರ ಎಕರೆ ಭೂಮಿಯನ್ನು ಹೊಂದಿರುವ ಜಿಂದಾಲ್ ಕಂಪನಿ, ಮತ್ತೆ 3667 ಎಕರೆ ಭೂಮಿಯನ್ನು ಪಡೆದುಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನಿಸಿರುವ ಆನಂದ್ ಸಿಂಗ್, ರಾಜಕೀಯವಾಗಿ, ಆಡಳಿತಾತ್ಮಕವಾಗಿ ಈ ವಿಷಯದಲ್ಲಿಯೂ ತಾಂತ್ರಿಕವಾಗಿಯೇ ನನಗಿಂತ ನೀವು ಹೆಚ್ಚು ಜ್ಞಾನವನ್ನು ಹೊಂದಿದ್ದೀರಿ. ಈ ಪ್ರಕರಣದಲ್ಲಿ ತಾವು ತೆಗೆದುಕೊಳ್ಳುವ ನಿರ್ಧಾರ, ಮಾಡುವ ಶಿಫಾರಸು ಇಡೀ ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ ಎಂದಿದ್ದಾರೆ.
ಈ ನಿರ್ಧಾರಕ್ಕೆ ರಾಜ್ಯಸಭಾ ಮಾಜಿ ಸದಸ್ಯ ಅನಿಲ್ ಲಾಡ್ ಸಹ ಸಮ್ಮತಿ ವ್ಯಕ್ತಪಡಿಸಿ ನನ್ನೊಂದಿಗೆ ನಿಂತಿದ್ದು, ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು, ಪ್ರಗತಿಪರ ಚಿಂತಕರು, ರೈತಾಪಿ ವರ್ಗ ಹಾಗೂ ಯುವಕರೂ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇದು ಹೋರಾಟದ ಸ್ವರೂಪ ಪಡೆದುಕೊಳ್ಳುವ ಮುನ್ನ ತಾವು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೀರಿ ಎಂಬ ಆಶೋತ್ತರವನ್ನು ನಾವು ಇಟ್ಟುಕೊಂಡಿದ್ದೇವೆ. ಈ ನಿಟ್ಟಿನಲ್ಲಿ ತಾವು ಆದಷ್ಟು ಶೀಘ್ರವಾಗಿ ತಮ್ಮ ತಂಡದೊಂದಿಗೆ ಖುದ್ದಾಗಿ ಜಿಲ್ಲೆಗೆ ಮತ್ತು ಕಾರ್ಖಾನೆಗೆ ಭೇಟಿ ನೀಡಬೇಕು. ನಾನು ನೀಡಿರುವ ಮಾಹಿತಿಗಳ ಬಗ್ಗೆಯೂ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಬೇಕು. ಬಳಿಕ ಜಿಲ್ಲೆಯ ರೈತರು, ಪ್ರಗತಿಪರ ಚಿಂತರಕರು, ಬುದ್ಧಿಜೀವಿಗಳು ಹಾಗೂ ಯುವಕರ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಪಡೆಯಬೇಕು. ಹಾಗೂ ಪರ್ಯಾಲೋಚಿಸಿ ಸಂಪುಟಕ್ಕೆ ಶಿಫಾರಸು ಮಾಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಜಿಂದಾಲ್ ಕಂಪನಿಯ ಸೋದರ ಸಂಸ್ಥೆ ಗ್ಯಾಮನ್ ಇಂಡಿಯಾ ಸಂಸ್ಥೆಯು ಬಳ್ಳಾರಿ-ಹೊಸಪೇಟೆ ಹೆದ್ದಾರಿಯ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಅನೇಕ ವರ್ಷಗಳಿಂದ ರಸ್ತೆಯ ನಿರ್ಮಾಣ ಕಾರ್ಯ ಮಾಡದೆ ರಸ್ತೆ ಸುಧಾರಣೆಯ ಬಗ್ಗೆ ನಿರ್ಲಿಪ್ತ ಮನೋಭಾವ ಹೊಂದಿದೆ. ಈ ಬಗ್ಗೆ ವಿಚಾರಿಸಿದರೆ ರಾಷ್ಟ್ರೀಯ ಹೆದ್ದಾರಿ ವಿಭಾಗದವರಿಂದಲೂ ಯಾವುದೇ ಸಮರ್ಪಕ ಉತ್ತರ ಸಿಗುತ್ತಿಲ್ಲ. ರಾಜ್ಯದಲ್ಲಿ ಹಾಗೂ ನಮ್ಮ ಜಿಲ್ಲೆಯಲ್ಲಿನ ಕೆಲವು ಕಂಪನಿಗಳು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಕಾರ್ಖಾನೆ ತೆರೆಯಲು ಮುಂದಾಗುತ್ತಿವೆ. ಬಳಿಕ ಸರ್ಕಾರದಿಂದ ಬೃಹತ್ ಭೂಮಿಯನ್ನು ಪಡೆದು ಅದರಲ್ಲಿನ ಒಂದು ಭಾಗದಲ್ಲಿ ಕಾರ್ಖಾನೆ ತೆರೆದು ಒಂದಷ್ಟು ಜಾಗವನ್ನು ಕಾಯ್ದಿರಿಸಿ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ವರ್ಷಗಳು ಕಳೆದರೂ ಯಾವುದೇ ವಿಸ್ತರಣೆ ಕಾರ್ಯ ಮಾಡುವುದಿಲ್ಲ. ಜನರು ಈ ಭೂಮಿಯ ವಿಷಯವನ್ನು ಮರೆತಂತಾದ ಮೇಲೆ ಅದನ್ನು ಕೈಗಾರಿಕಾ ಉದ್ದೇಶದಿಂದ ವಾಣಿಜ್ಯ ಉದ್ದೇಶಕ್ಕೆ ಅಥವಾ ವಸತಿ ಉದ್ದೇಶಕ್ಕೆ ಭೂ ಬದಲಾವಣೆ ಮಾಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆಯಲ್ಲಿ ಪಾಲ್ಗೊಳ್ಳುತ್ತವೆ ಎಂಬ ಮಾಹಿತಿಯಿದೆ. ಈ ಅಂಶವನ್ನು ತಾವು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ಪರಾಮರ್ಶಿಸಲು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ಕಂಪನಿಗಳು ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಕಡಿಮೆ ಬೆಲೆಗೆ ಭೂಮಿಯನ್ನು ಸರ್ಕಾರದಿಂದ ಪಡೆದು ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು ದರವನ್ನು ತಮ್ಮ ಅಭಿಯಂತರರಿಂದ ನಿಗದಿ ಮಾಡಿಸಿ ಭೂಮಿಯನ್ನು ಬ್ಯಾಂಕ್ಗಳಿಗೆ ಅಡವಿಟ್ಟು ನಂತರ ಸಾವಿರಾರು ಕೋಟಿ ಸಾಲವನ್ನು ಬ್ಯಾಂಕುಗಳಿಂದ ಪಡೆದು ಸರ್ಕಾರಕ್ಕೆ ಹಾಗೂ ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗುವ ಉದಾಹರಣೆಯನ್ನೂ ಸಹ ತಾವು ಗಮನಿಸಬಹುದು. ಆದ್ದರಿಂದ ಯಾವುದೇ ಭೂಮಿಯನ್ನು ಕಾರ್ಖಾನೆಗೆ ಲೀಸ್ಗೆ ನೀಡುವಂತಹ ಸಂದರ್ಭದಲ್ಲಿ ಬ್ಯಾಂಕುಗಳಿಗೆ ಅಡಮಾನ ಇಡಬಾರದು ಎಂದು ಷರತ್ತು ವಿಧಿಸುವುದು ಸಹ ಸೂಕ್ತವಾಗಿರುತ್ತದೆ ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.