ಬೆಂಗಳೂರು: ವಿಧಾನಸಭೆಯ ಉಪ-ಸಭಾಧ್ಯಕ್ಷ ಸ್ಥಾನಕ್ಕೆ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಅವರು ನಾಮಪತ್ರ ಸಲ್ಲಿಸಿದ್ದು, ಒಬ್ಬರೇ ಉಮೇದುವಾರಿಕೆ ಸಲ್ಲಿಸಿರುವುದರಿಂದ ಇಂದು ಅಧಿಕೃತವಾಗಿ ಡೆಪ್ಯುಟಿ ಸ್ಪೀಕರ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಮಾಮನಿ ಅವರು ನಿನ್ನೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಉಪ-ಸಭಾಧ್ಯಕ್ಷರ ಚುನಾವಣೆಗೆ ಮಾರ್ಚ್ 20ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇಂದು ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಕೆಯ ಅವಕಾಶ ನೀಡಲಾಗಿತ್ತು.
ಆನಂದ್ ಮಾಮನಿ ನಾಮಪತ್ರಕ್ಕೆ ಸೂಚಕರಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಮುಖ್ಯ ಸಚೇತಕ ಸುನಿಲ್ ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಹಾಗೂ ವಸತಿ ಸಚಿವ ವಿ. ಸೋಮಣ್ಣ ಸಹಿ ಹಾಕಿದ್ದರು.
ಉಪಸಭಾಧ್ಯಕ್ಷ ಸ್ಥಾನಕ್ಕೆ ಆನಂದ್ ಮಾಮನಿ ನೇಮಕವಾಗುವುದು ಬಹುತೇಕ ಖಚಿತವಾಗಿದ್ದು, ಘೋಷಣೆಯೊಂದೆ ಬಾಕಿ ಉಳಿದಿದೆ. ಈ ಹಿಂದೆ ಉಪಸಭಾಧ್ಯಕ್ಷರಾಗಿದ್ದ ಜೆಡಿಎಸ್ನ ಶಾಸಕ ಕೃಷ್ಣಾರೆಡ್ಡಿ ಅವರು ಕಳೆದ ವಾರವಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಬಿಜೆಪಿಯ ಹಿರಿಯ ಮುಖಂಡ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗಜ್ಞಾನೇಂದ್ರ ಅವರನ್ನು ನೇಮಕ ಮಾಡಲು ಸಿಎಂ ಒಲವು ತೋರಿದ್ದರು. ಆದರೆ, ಮಾಮನಿಗೆ ಈ ಸ್ಥಾನವನ್ನು ನೀಡಬೇಕೆಂದು ಜಾರಕಿಹೊಳಿ ಸಹೋದರರು ಸೇರಿದಂತೆ ಹಲವರು ಪಟ್ಟು ಹಿಡಿದಿದ್ದರು ಎಂದು ಹೇಳಲಾಗುತ್ತಿದೆ.