ಬೆಂಗಳೂರು: ಲಕ್ಷಾಂತರ ರೂ. ಸಂಬಳ ನೀಡುವ ಕಾಯಕ ಬಿಟ್ಟು, ಬೀದಿ ಬದಿ ಮಕ್ಕಳಗೆ, ಅನಾಥರಿಗೆ, ಬಡವರಿಗೆ ಸಂಗೀತ ಕಲಿಸುವುದನ್ನೇ ಅವರು ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮಕ್ಕಳಿಂದ ಯಾವುದೇ ಫಲಾಪೇಕ್ಷೆ ಬೇಡದೇ ಕೇವಲ 1ರೂ.ಗೆ ಸಂಗೀತ ಕಲಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಹೌದು ಎಸ್ವಿ ರಾವ್ ಎಂಬುವರು ಕಲಿತದ್ದು ಸಿವಿಲ್ ಇಂಜಿನಿಯರಿಂಗ್, ಬೃಹತ್ ಕಟ್ಟಡ ನಿರ್ಮಾಣ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೈಟ್ ಇಂಜಿನಿಯರ್ ಆಗಿದ್ದ ಇವರು ತಿಂಗಳಿಗೆ ಲಕ್ಷಾಂತರ ರೂ ಸಂಬಳ ಎಣಿಸುತ್ತಿದ್ದರು. ಇದೀಗ ಇವೆಲ್ಲವನ್ನು ಬಿಟ್ಟು ಕೇವಲ 1 ರೂ. ಗೆ ಬೀದಿ ಬದಿ ಮಕ್ಕಳಿಗೆ ಸಂಗೀತ ಕಲಿಸುವ ಕಾಯಕ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಂಧರು, ವೃದ್ಧರು ಮತ್ತಿತರರಿಗೆ ಗಿಟಾರ್, ಕೊಳಲು, ಕೀಬೋರ್ಡು ಕಲಿಸಿ ಇತರರಿಗೆ ಆದರ್ಶಪ್ರಾಯರಾಗಿದ್ದಾರೆ.
ಎಸ್ವಿ ರಾವ್ ಮೂಲತಃ ಹೈದರಾಬಾದಿನವರು. ಶೇಷಾದ್ರಿಪುರಂ ಕಾಲೇಜ್, ಕಬ್ಬನ್ ಪಾರ್ಕ್, ಜೆಪಿ ನಗರ ಸೇರಿದಂತೆ ನಗರದ ಹಲವೆಡೆ ಸಂಗೀತ ತರಗತಿಗಳನ್ನು ನಡೆಸುತ್ತಾ ರಾಜ್ಯದ ಹಲವು ಕಡೆಗಳಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ.
ಅಂಧ ಮಗಳು, ಮಡದಿಗೆ ಸೂರನ್ನು ಕಲ್ಪಿಸಿ ಸದ್ಯ ಇಡೀ ಜೀವನವನ್ನು ಸಮಾಜದ ಏಳಿಗೆಗೆ ಮುಡಿಪಾಗಿಟ್ಟಿದ್ದಾರೆ. ಹಲವು ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಇಷ್ಟೆಲ್ಲ ಸಾಧನೆ ಮಾಡಿದರೂ, ಬೀದಿ ಬದಿಯಲ್ಲಿ ವಾಸಿಸುತ್ತಾ ಕಾಲಲ್ಲಿ ಚಪ್ಪಲಿಯನ್ನೂ ಹಾಕದೇ ಸಂಗೀತವನ್ನು ಜೀವನವಾಗಿಸಿಕೊಂಡಿದ್ದಾರೆ. 60ರ ಹರೆಯದ ರಾವ್ ಹಲವು ರಾಜ್ಯಗಳಲ್ಲಿ ಶಿಷ್ಯಕೋಟಿಯನ್ನು ಸೃಷ್ಟಿಸಿಕೊಂಡಿದ್ದು, ಅವರನ್ನೂ ಈ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಈ ಎಲ್ಲ ಕೆಲಸಕ್ಕೆ ಮಗಳೇ ಸ್ಫೂರ್ತಿ ಎನ್ನುವ ರಾವ್ ಸ್ವಚ್ಛ ಭಾರತ್ನಂತೆ ಸಂಗೀತ ಭಾರತ್ ಆಗಬೇಕೆಂಬ ಕನಸನ್ನು ಹೊತ್ತಿದ್ದಾರೆ.
ಸಂಗೀತವೇ ಸುಖಿ ಸ್ವಾಸ್ಥ್ಯ ಜೀವನದ ಅಡಿಪಾಯ ಎಂದುಕೊಂಡಿರುವ ರಾವ್, ಮಾನವ ಜೀವಗಳಿಗೆ ಮಾದರಿಯಾಗಿದ್ದಾರೆ.