ಬೆಂಗಳೂರು : ತಾಳ್ಮೆ ಕಳೆದುಕೊಂಡು ವೈದ್ಯರ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಡಾಕ್ಟರ್ ಮೇಲೆ ಹಲ್ಲೆ ಮಾಡಿರುವ ಆರೋಪಿ ರೋಗಿಯ ಪುತ್ರನೇ ಆಗಿದ್ದಾನೆ. ಕೊರೊನಾ ಪಾಸಿಟಿವ್ ಬಂದು ಆರೋಪಿಯ ತಂದೆ ನಗರದ ಬನ್ನೇರುಘಟ್ಟ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತದ ನಂತರ ಕೊರೊನಾ ನೆಗೆಟಿವ್ ಎಂದು ರಿಪೋರ್ಟ್ ಬಂದಿದೆ.
ಆದರೂ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಶ್ವಾಸಕೋಶ ಇನ್ಫೆಕ್ಷನ್ ಆಗಿದ್ದ ಹಿನ್ನೆಲೆ, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಈ ಕುರಿತು ರೋಗಿಯ ಕಂಡೀಷನ್ ಬಗ್ಗೆ ವಿವರಿಸುತ್ತಿದ್ದ ವೇಳೆ, ರೋಗಿ ಮಗನಿಂದ ಡಾಕ್ಟರ್ ಪದ್ಮನಾಭ್ ಹಾಗೂ ಸಿಬ್ಬಂದಿ ಮೇಲೆ ವಿನಾಕಾರಣ ಏಕಾಏಕಿ ಹಲ್ಲೆ ನೆಡೆದಿದೆ. ಮೊಬೈಲ್ ಫೋನ್ ಡಾಕ್ಟರ್ ತಲೆಗೆ ಎಸೆದು ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಚಿವ ಡಾ. ಕೆ. ಸುಧಾಕರ್
ಮಾಹಿತಿಯಂತೆ, ಆಸ್ಪತ್ರೆಯ ನಾನ್ ಕೋವಿಡ್ ಐಸಿಯುನಲ್ಲಿ ತಂದೆಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಖಾಸಗಿ ಆಸ್ಪತ್ರೆಯ ಆಡಳಿತಾಧಿಕಾರಿ ಈ ಬಗ್ಗೆ ದೂರು ದಾಖಲಿಸಿದ್ದು, ರೋಗಿಯ ಮಗ ಜಗದೀಶ್‌ನನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿ ಠಾಣೆಯಲ್ಲಿ ಇರಿಸಿ ತನಿಖೆ ಮುಂದುವರೆಸಿದ್ದಾರೆ.