ಬೆಂಗಳೂರು: ಮಾಲ್ಡಾ ಟೌನ್-ಬೆಂಗಳೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಎಸ್ಎಂವಿಟಿ ಬೆಂಗಳೂರು ನಿಲ್ದಾಣವನ್ನು ಸೋಮವಾರ ಸಂಜೆ 7.30ಕ್ಕೆ ತಲುಪಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ವರ್ಚುವಲ್ ವೇದಿಕೆಯ ಮೂಲಕ ಈ ರೈಲನ್ನು ಲೋಕಾರ್ಪಣೆಗೊಳಿಸಿದ್ದರು.
ಡಿಸೆಂಬರ್ 30ರಂದು ಮಾಲ್ಡಾ ಟೌನ್‌ನಿಂದ ಹೊರಟಿದ್ದ ರೈಲನ್ನು ಎಸ್ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಮತ್ತು ಎಂ.ಎಲ್.ಸಿ ಎ.ದೇವೇಗೌಡ ಸ್ವಾಗತಿಸಿದರು. ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್ ಮೋಹನ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಹಾಗೂ ಇತರ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಲ್ಡಾ ಟೌನ್‌ನಿಂದ ಹೊರಟ ರೈಲು ನ್ಯೂ ಫರಕ್ಕಾ, ಗುಮಾನಿ, ರಾಮ್‌ಪುರಹಟ್, ಬೋಲ್ಪುರ್ ಶಾಂತಿನಿಕೇತನ, ಬರ್ದ್ಧಮಾನ್, ದಂಕುಣಿ, ಭಟ್ಟನಗರ, ಆಂಡುಲ್, ಖರಗ್‌ಪುರ, ಬೆಲ್ಡಾ, ಜಲೇಶ್ವರ, ಬಾಲಸೋರ್, ಸೊರೊ, ಭದ್ರಕ್, ಕಟಕ್, ಭುವನೇಶ್ವರ, ಖುರ್ದಾ ರೋಡ್, ಬ್ರಹ್ಮಪುರ, ಪಲಾಸ, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ದುವ್ವಾಡ, ತುನಿ, ಸಮಲ್ಕೋಟ್, ರಾಜಮಂಡ್ರಿ, ಏಲೂರು, ವಿಜಯವಾಡ, ತೆನಾಲಿ, ಚಿರಾಲ, ಓಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟಾ, ಕಟಪಾಡಿ ಮತ್ತು ಜೋಲಾರ್‌ಪೇಟೆ ಮೂಲಕ ಬೆಂಗಳೂರು ನಿಲ್ದಾಣ ತಲುಪಿದೆ. ರೈಲು ಹಾದು ಬಂದ ನಿಲ್ದಾಣಗಳಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ರೈಲನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಈ ರೈಲಿನ ಎರಡೂ ತುದಿಗಳಲ್ಲಿ ಇಂಜಿನ್‌ಗಳಿವೆ. ಪ್ರಯಾಣಿಕರಿಗಾಗಿ ಉತ್ತಮ ಲಗೇಜ್ ರ್ಯಾಕ್, ಸೂಕ್ತ ಮೊಬೈಲ್ ಹೋಲ್ಡರ್, ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ದೀಪ, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಸೇರಿದಂತೆ ಮುಂತಾದ ಸೌಲಭ್ಯಗಳಿವೆ.
ರೈಲು ನಿಲ್ದಾಣ ಲೋಕಾರ್ಪಣೆ: ವಿಮಾನ ನಿಲ್ದಾಣದ ಮಾದರಿಯಲ್ಲಿ ನವೀಕರಿಸಲಾಗಿರುವ ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರಂದು ಉದ್ಘಾಟಿಸಿದರು. ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಸಾಮಗ್ರಿಗಳ ಅಂಗಡಿಗಳು, ಕ್ಲೋಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು ಹಾಗೂ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ರೈಲುಗಳಿಗೆ ಚಾಲನೆ: ಇದೇ ವೇಳೆ ನಿಲ್ದಾಣದಿಂದಲೇ 2 ಅಮೃತ್ ಭಾರತ್, 6 ವಂದೇ ಭಾರತ್ ರೈಲುಗಳಿಗೆ ಚಾಲನೆ ಕೂಡ ನೀಡಿದ್ದರು. ಅಮೃತ್ ಭಾರತ್ ರೈಲಿನಲ್ಲಿ ತೆರಳಿದ ಮೋದಿ ಅವರು ಅಲ್ಲಿದ್ದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ಮಾತನಾಡಿಸಿದರು.
ಎರಡು ಅಮೃತ್ ಭಾರತ್ ರೈಲುಗಳು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಮತ್ತು ಮಾಲ್ಡಾ ಟೌನ್- ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ಗೆ ಇವು ಸಂಪರ್ಕ ಕಲ್ಪಿಸುತ್ತವೆ.
ಇದನ್ನೂ ಓದಿ: ಅಯೋಧ್ಯೆ ರೈಲು, ವಿಮಾನ ನಿಲ್ದಾಣ ಉದ್ಘಾಟಿಸಿ, ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ