ಬೆಂಗಳೂರು: ಬಿಡಿಎಯಲ್ಲಿ ಹಲವಾರು ವರ್ಷಗಳಿಂದ ಇರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮಹತ್ವದ ನಿರ್ಧಾರವನ್ನು ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಮಂಡಳಿ ಸಭೆ ನಂತರ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಕೆಲ ಅಧಿಕಾರಿಗಳು ಜಡ್ಡುಗಟ್ಟಿದಂತಾಗಿದ್ದು ಹಲವಾರು ಅಕ್ರಮಗಳನ್ನು ಎಸಗುವ ಮೂಲಕ ಸಂಸ್ಥೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ಬಿಡಿಎದಲ್ಲಿ ನೇಮಕಾತಿ ಆಗಿ ಇಲ್ಲಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಇವರಲ್ಲಿ ಕೆಲವರು ಜಡ್ಡುಗಟ್ಟಿದಂತಾಗಿದ್ದು, ಇದರಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ವರ್ಗಾವಣೆಗೆ ಅನುವು ಆಗುವ ರೀತಿಯಲ್ಲಿ ಬಿಡಿಎ ಕಾಯ್ದೆ 1976ರ ಕಲಂ 50ಕ್ಕೆ ಉಪ ಕಲಂ 3ಅನ್ನು ಹೊಸದಾಗಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.
ಕೆಂಪೇಗೌಡ ಬಡಾವಣೆ ಮೂಲ ಸೌಕರ್ಯಕ್ಕೆ 650 ಕೋಟಿ, ಬನಶಂಕರಿ 6ನೇ ಹಂತ ಬಡಾವಣೆಗೆ ಕಾವೇರಿ ನೀರು ಪೂರೈಸಲು 168 ಕೋಟಿ ರೂಪಾಯಿ ವೆಚ್ಚವಾಗಲಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ಸಾಧಕ ಬಾಧಕಗಳನ್ನು ಪರಿಶೀಲಿಸಿ ವರದಿ ನೀಡಲು ಮೂವರು ನಿವೃತ್ತ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿದೆ ಎಂದರು.