ಬೆಂಗಳೂರು : ಟ್ರಾಫಿಕ್ ದಟ್ಟಣೆ ನಡುವೆ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು "ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ' ಜಾರಿಗೆ ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್ ರದ್ದುಪಡಿಸಿರುವ ರಾಜ್ಯ ಸರ್ಕಾರದ ಧೋರಣೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಯಾವುದೇ ಕಾರಣವಿಲ್ಲದೆ ಜನೋಪಯೋಗಿ ಟೆಂಡರ್ನ ರದ್ದುಪಡಿಸಲಾಗಿದೆ. ಟೆಂಡರ್ ಪ್ರಕ್ರಿಯೆ ರದ್ದುಪಡಿಸಿರುವುದಕ್ಕೆ ಯಾರು ಹೊಣೆ? ಎಂಬ ಬಗ್ಗೆ ಸಾರ್ವಜನಿಕರಿಗೆ ಸರ್ಕಾರ ಉತ್ತರಿಸಲೇಬೇಕು. ಟೆಂಡರ್ ಪ್ರಕ್ರಿಯೆ ರ್ಪೂಣಗೊಂಡಿದ್ದರೆ ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಆ್ಯಂಬುಲೆನ್ಸ್‌ಗಳು ಲಭ್ಯವಾಗುತ್ತಿದ್ದವು ಎಂದಿತು.
ಅರ್ಜಿದಾರರ ಪರ ವಕೀಲರಾದ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಸರ್ಕಾರ ಏಕಾಏಕಿ ಟೆಂಡರ್ ಹಿಂಪಡೆದಿದೆ. ಅದಕ್ಕೆ ಸಕಾರಣವನ್ನೂ ನೀಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿದೆ. ಆದರೂ ಕೋರ್ಟ್ ಅನುಮತಿ ಪಡೆಯದೆ ಟೆಂಡರ್ ರದ್ದುಪಡಿಸಲಾಗಿದೆ. ಹೊಸದಾಗಿ ಟೆಂಡರ್ ಕರೆಯುವುದಾಗಿ ಹೇಳಿದ್ದ ಸರ್ಕಾರ, ಆ ಪ್ರಕ್ರಿಯೆಯನ್ನು ಸಹ ಮುಂದುವರಿಸಿಲ್ಲ.
ಹೀಗಾಗಿ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿಯಿರುವ ಮಾಹಿತಿ ಇದ್ದೂ ಟೆಂಡರ್ ರದ್ದುಪಡಿಸಿದ್ದಾರಾ ಅಥವಾ ಮಾಹಿತಿ ಇಲ್ಲದೇ ಟೆಂಡರ್ ರದ್ದುಪಡಿಸಿದ್ದಾರಾ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಉತ್ತರಿಸಿ, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿ ಇರುವುದರಿಂದ ಹೊಸ ಪ್ರಕ್ರಿಯೆ ನಡೆಸಿಲ್ಲ.
ಈ ಬಗ್ಗೆ ಸರ್ಕಾರದ ವತಿಯಿಂದ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ, ಟೆಂಡರ್ ಪ್ರಕ್ರಿಯೆ ರದ್ದುಪಡಿಸಿರುವುದಕ್ಕೆ ನಿಜವಾದ ಕಾರಣವನ್ನು ಸರ್ಕಾರ ತಿಳಿಸಬೇಕು ಎಂದು ತಾಕೀತು ಮಾಡಿ, ಜೂನ್ 24ರೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿತು.
ಹಿಂದಿನ ವಿಚಾರಣೆ ವೇಳೆ ಆರೋಗ್ಯ ಸಚಿವರ ಸೂಚನೆ ಮೇರೆಗೆ ಟೆಂಡರ್ ರದ್ದುಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು. ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಹೈಕೋರ್ಟ್, ಟೆಂಡರ್ ರದ್ದುಪಡಿಸಿದ ಬಗ್ಗೆ ಲಿಖಿತ ದಾಖಲೆ ನೀಡಿಲ್ಲ. ಮುಖ್ಯವಾಗಿ ಟೆಂಡರ್ ರದ್ದುಪಡಿಸಲು ಸಲಹೆ ನೀಡಿದ ತಜ್ಞರು ಯಾರು? ಅವರ ನೀಡಿದ ಸಲಹೆ ಏನು? ಎಂಬ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ. ಇನ್ನು, ತಜ್ಞರ ಮೌಖಿಕ ಸಲಹೆ ಆಧರಿಸಿ ಟೆಂಡರ್ ರದ್ದುಪಡಿಸಲಾಯಿತೇ? ಸ್ಪಷ್ಟಪಡಿಸಿ ಎಂದು ನಿರ್ದೇಶಿಸಿತ್ತು.
ಅಲ್ಲದೆ, ಟೆಂಡರ್ ಪ್ರಕ್ರಿಯೆ ವಿಚಾರದಲ್ಲಿ ಹೈಕೋರ್ಟ್ ನಿಗಾವಹಿಸಿದೆ. ಟೆಂಡರ್ ಅಂತಿಮಗೊಳಿಸುವ ಕುರಿತು ಸರ್ಕಾರವೂ ಭರವಸೆ ನೀಡಿತ್ತು. ನಂತರ ಕೋರ್ಟ್ ಗಮನಕ್ಕೇ ತರದೆ ಟೆಂಡರ್ ರದ್ದುಪಡಿಸಲಾಗಿದೆ. ಕೋರ್ಟ್ ವಿಚಾರಣೆ ಬಗ್ಗೆ ಆರೋಗ್ಯ ಸಚಿವರಿಗೆ ಮಾಹಿತಿ ಇರಲಿಲ್ಲವೇ? ಎಂದು ಕಟುವಾಗಿ ಪ್ರಶ್ನಿಸಿದ್ದ ಪೀಠ, ಸರ್ಕಾರದ ಈ ಕ್ರಮ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಚರಿಸಿತ್ತು.
ಓದಿ: ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??