ನೆಲಮಂಗಲ: ತುಮಕೂರಿನಿಂದ ಬೆಂಗಳೂರು ಕಡೆ ರೋಗಿಯನ್ನು ಕರೆದುಕೊಂಡು ಹೊರಟ ಆಂಬ್ಯುಲೆನ್ಸ್ವೊಂದು ಲಾರಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಿಗೆಗೆ ಇಬ್ಬರು ಸಾವಿಗೀಡಾಗಿದ್ದಾರೆ.
ಏಪ್ರಿಲ್ 30ರ ಮಧ್ಯಾಹ್ನ 2:30ರ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ. ತುರ್ತು ಚಿಕಿತ್ಸೆಗಾಗಿ ರೋಗಿಯನ್ನು ತುಮಕೂರಿನಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಂಬ್ಯುಲೆನ್ಸ್ನಲ್ಲಿದ್ದ 6 ಮಂದಿ ಹೊತ್ತಿ ಉರಿಯುತ್ತಿದ್ದ ವಾಹನದಲ್ಲಿ ಸಿಲುಕಿಕೊಂಡಿದ್ದು, ಸುಟ್ಟುಗಾಯಗೊಂಡಿದ್ದ ಇಬ್ಬರು ಸಾವಿಗೀಡಾಗಿದ್ದಾರೆ.
ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘಟನೆ ನಡೆದಿದ್ದು, ಶಿರಾ ಮೂಲದ ಪಾರ್ಶ್ವವಾಯು ರೋಗಿಗಳಾದ ಹಸೀನಾ ಎಂಬುವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಓಮ್ನಿ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಸಂಬಂಧಿಕರು ಹೊರಟ್ಟಿದ್ದರು. ಅತಿ ವೇಗದಲ್ಲಿದ್ದ ಆಂಬ್ಯುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬ್ಯುಲೆನ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ತಕ್ಷಣವೇ ಸ್ಥಳದಲ್ಲಿಯೇ ಇದ್ದ ಟ್ಯಾಂಕರ್ ಮೂಲಕ ಬೆಂಕಿ ನಂದಿಸಿ ವಾಹನದಲ್ಲಿ ಸಿಲುಕಿದವರನ್ನು ಹೊರಗೆ ತೆಗೆಯಲಾಗಿತ್ತು. ಟ್ಯಾಂಕರ್ ಇಲ್ಲದಿದ್ದಲ್ಲಿ ಆಂಬ್ಯುಲೆನ್ಸ್ ಸಮೇತ ಆರು ಮಂದಿಯೂ ಸುಟ್ಟು ಬೂದಿಯಾಗುತ್ತಿದ್ದರು. ಇನ್ನು ಶಬೀನಾ, ಚಾಂದಿನಿ, ಸಲ್ಮಾನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.