ಬೆಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ‘ಮಹಾ ಪರಿನಿರ್ವಾಣ ದಿನ’ದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಸಿಎಂ ಇಂದು ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಅಂಬೇಡ್ಕರ್ ಅವರು ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿದ ವ್ಯಕ್ತಿ. ಸಮ ಸಮಾಜಕ್ಕೆ ಶ್ರಮಿಸಿದ ಡಾ. ಬಿ ಆರ್ ಅಂಬೇಡ್ಕರ್ ಎಲ್ಲರಿಗೂ ಆದರ್ಶ ಪ್ರಾಯವಾಗಿದ್ದಾರೆ. ಬಿ ಆರ್ ಅಂಬೇಡ್ಕರ್ ಓರ್ವ ಬಹುಮುಖ ವ್ಯಕ್ತಿತ್ವದವರಾಗಿದ್ದರು.
ದೇಶದ ಏಳಿಗೆಗೆ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಹಾಗೂ ಪ್ರತಿಭಾವಂತ ಅರ್ಥಶಾಸ್ತ್ರಜ್ಞರಾಗಿದ್ದರು ಎಂದು ತಿಳಿಸಿದರು. ದೇಶಕ್ಕೆ ಸಶಕ್ತ ಸಂವಿಧಾನ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂರ್ತ ರೂಪ ನೀಡಿದರು.
ಮಹಿಳೆಯರಿಗೆ ಸಮಾನತೆ, ಕಾರ್ಮಿಕರ ಕಲ್ಯಾಣ, ಶಿಕ್ಷಣ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದವರು. ಮಾನವತಾವಾದಿಯಾಗಿದ್ದ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಅರ್ಥ ಮಾಡಿಕೊಂಡು, ಅವರು ತೋರಿಸಿದ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡಬೇಕು.
ಸಮ ಸಮಾಜ ನಿರ್ಮಾಣದ ಗುರಿ ನಮ್ಮ ಸರ್ಕಾರದ್ದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸವಲತ್ತು ಸಿಗುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದರು.