ಬೆಂಗಳೂರು: ಕೋವಿಡ್ನಿಂದಾಗಿ ರದ್ದುಗೊಳಿಸಿದ್ದ ಜಾತ್ರೆ, ಉತ್ಸವ, ಅನ್ನ ದಾಸೋಹ, ಬ್ರಹ್ಮರಥೋತ್ಸವಗಳಂತಹ ಸೇವೆಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ನಡೆಸಲು ಧಾರ್ಮಿಕ ದತ್ತಿ ಇಲಾಖೆ ಅವಕಾಶ ನೀಡಿ ಸುತ್ತೋಲೆ ಹೊರಡಿಸಿದೆ.
ಫೆಬ್ರವರಿ ತಿಂಗಳಿನಿಂದ ರಾಜ್ಯದ ವಿವಿಧೆಡೆ ಜಾತ್ರೆ, ಉತ್ಸವಗಳು ನಡೆಯಲಿವೆ. ಇವುಗಳನ್ನು ನಡೆಸಲು ಅನುಮತಿ ನೀಡುವಂತೆ ಸಾಕಷ್ಟು ಬೇಡಿಕೆಗಳು ಇಲಾಖೆಗೆ ಬಂದಿದ್ದು, ಜಾತ್ರೆ, ಉತ್ಸವಗಳನ್ನು ತಡೆಹಿಡಿಯುವುದರಿಂದ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಉಂಟಾಗುವ ಮಾತುಗಳು ಕೇಳಿಬಂದಿವೆ.
ಹಾಗಾಗಿ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಧಾರ್ಮಿಕ ದತ್ತಿ ಇಲಾಖೆಯು ಭಕ್ತಾದಿಗಳ ಹಿತಾದೃಷ್ಟಿಯಿಂದ ಜಾತ್ರೆ, ಉತ್ಸವ, ಅನ್ನದಾಸೋಹ, ತೀರ್ಥ ವಿತರಣೆ, ಪೂಜಾ ಕೈಂಕರ್ಯಗಳು ಸೇರಿದಂತೆ ಇತರ ಸೇವೆಗಳನ್ನು ನಡೆಸಲು ಅನುಮತಿ ನೀಡಿದೆ.

ಆದರೆ ಕೋವಿಡ್ ನಿಯಂತ್ರಣ ಸಂಬಂಧ ಈಗಾಗಲೇ ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಷರತ್ತುಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನಡೆಸಬೇಕು ಎಂದು ಇಲಾಖೆ ಸೂಚಿಸಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಎಲ್ಲಾ ಸೇವೆಗಳನ್ನು ರದ್ದುಪಡಿಸಿ ಆದೇಶಿಸಲಾಗಿತ್ತು. ನಂತರ ಭಕ್ತಾದಿಗಳ ಬೇಡಿಕೆ ಅನ್ವಯ ಸೆಪ್ಟೆಂಬರ್ ತಿಂಗಳಿನಿಂದ ದೈನಂದಿನ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಈಗ ಕೋವಿಡ್ ಸುರಕ್ಷತಾ ಕ್ರಮಗಳ ಷರತ್ತಿನೊಂದಿಗೆ ಜಾತ್ರೆ, ಉತ್ಸವಗಳಿಗೂ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿಂದು 366 ಮಂದಿಗೆ ಕೊರೊನಾ ದೃಢ: ಇಬ್ಬರು ಬಲಿ