ಬೆಂಗಳೂರು: ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತಯುತವಾಗಿ ಆಚರಿಸಲು ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸುವಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ ಸಿಎಂಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರ ಬರೆದಿರುವ ಅವರು, ಮುಸ್ಲಿಂ ಸಮುದಾಯ ಆಚರಿಸುವ ಎರಡು ಮಹತ್ವದ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬದ ಸಂದರ್ಭದಲ್ಲಿ ಜಾನುವಾರುಗಳನ್ನು ಖುರುಬಾನಿ ನೀಡುವುದು ಸಂಪ್ರದಾಯ. ಈ ಸಂದರ್ಭದಲ್ಲಿ ಯಾವುದೇ ಅನಧಿಕೃತ ಕ್ರಮಗಳಿಗೆ ಯಾವ ಕಾರಣಕ್ಕೂ ಅವಕಾಶ ಆಗದಂತೆ ನಿಗಾ ವಹಿಸುವ ಜತೆಗೆ ಅಧಿಕೃತವಾಗಿ ಜಾನುವಾರು ಸಾಗಿಸುವವರಿಗೆ ಅನಗತ್ಯ ಕಿರುಕುಳ ನೀಡದೇ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಅವಕಾಶ ಮಾಡಿಕೊಡಬೇಕೆಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ತಾವು ಸೂಕ್ತ ನಿರ್ದೇಶನ ನೀಡಬೇಕೆಂದು ಕೂಡ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಶಿವಾಜಿನಗರ ಶಾಸಕರಾಗಿದ್ದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಅವರ ಶಾಸಕತ್ವವನ್ನು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಸದ್ಯ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ಇವರೊಂದಿಗೆ ಅನರ್ಹಗೊಂಡಿರುವ ಇತರೆ 16 ಶಾಸಕರು ಕೂಡ ಮುಂದಾಗಿದ್ದಾರೆ. ಈ ಮಧ್ಯೆ ಪಕ್ಷ ಕೂಡ ಅವರನ್ನು ಉಚ್ಛಾಟಿಸಿದೆ. ಸದ್ಯ ಇವರ ಶಾಸಕತ್ವ ಅನರ್ಹತೆ ಕೋರ್ಟ್ ಮೆಟ್ಟಿಲೇರುವ ಸಂದರ್ಭದಲ್ಲಿದ್ದರೂ ರೋಷನ್ ಬೇಗ್ ತಮ್ಮ ಪತ್ರದಲ್ಲಿ ಮಾಜಿ ಶಾಸಕ ಎಂದು ನಮೂದಿಸಿಕೊಂಡಿದ್ದಾರೆ.