ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣಾ ದಳ (ಎಸಿಬಿ) ಪ್ರಸ್ತುತ ಲೋಕಾಯುಕ್ತ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತು.
ತನಿಖೆಗೆ ಮಧ್ಯಂತರ ತಡೆ ನೀಡಬೇಕು ಎಂದು ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಜಮೀರ್ ಖಾನ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ 2023ರ ಏಪ್ರಿಲ್ 6ರಂದು ಪ್ರಕರಣದ ತನಿಖೆಗೆ ತಡೆ ನೀಡಿರುವುದರಿಂದ ಈ ಆದೇಶವನ್ನು 30 ದಿನಗಳ ಕಾಲ ಅಮಾನತ್ತಿನಲ್ಲಿರಲಿದೆ ಎಂದು ಪೀಠ ಹೇಳಿದೆ.
ಪ್ರಕರಣ ಕುರಿತಂತೆ ವಾದ ಆಲಿಸಿದ ನ್ಯಾಯಪೀಠ, ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿರುದ್ಧ ಇಡಿ ಈಗಾಗಲೇ ಪ್ರಕರಣ ದಾಖಲಿಸಿದ್ದು, ಜಮೀರ್ ಅಹ್ಮದ್ ಮನೆ ಮೇಲೆಯೂ ದಾಳಿ ಮಾಡಿದೆ. ಜೊತೆಗೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಲ್ಲಿ ವರದಿ ಸಲ್ಲಿಸಿದೆ. ಆದ್ದರಿಂದ ಎಸಿಬಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಇಡಿ ಪ್ರಕ್ರಿಯೆ ಪ್ರಾರಂಭಿಸಿತ್ತು. ಆದ್ದರಿಂದ ಇಡಿ ವರದಿಯ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿರುವುದು ತಪ್ಪಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಕನಿಷ್ಠ ಪಕ್ಷ ಅರ್ಜಿದಾರರ ಆದಾಯವು ಗೊತ್ತಿರುವ ಮೂಲಗಳಿಂದ ಶೇ. 2031ರಷ್ಟಿದೆ ಎಂದು ತಿಳಿದು ಬಂದಿದೆ. ಈ ಮೂಲವನ್ನು ತಿಳಿಯುವುದಕ್ಕಾಗಿಯಾದರೂ ತನಿಖೆ ಅಗತ್ಯವಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಐ ಮಾನೀಟರಿ ಅಡ್ವಸರಿ ಲಿಮಿಡೆಡ್‌ನ (ಐಎಂಎ) ಮನ್ಸೂರ್ ಅಲಿಕಾನ್ ಅವರೊಂದಿಗೆ ವಹಿವಾಟು ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ವರದಿಯನ್ನು ಪಡೆದಿದ್ದ ಎಸಿಬಿ, ನಂತರ ಪ್ರಕರಣ ದಾಖಲಿಸಿತ್ತು. ಈ ವೇಳೆ ಜಮೀರ್ ಅವರಿಗೆ ಮನ್ಸೂರ್ ಅಲಿಖಾನ್ ಫ್ಲಾಟ್ ಖರೀದಿ ಮಾಡುವುದಕ್ಕಾಗಿ 9.38 ಕೋಟಿ ರೂ., 25 ಕೋಟಿ ರೂ. ಸಾಲ ಹಾಗೂ 29.38 ಕೋಟಿ ರೂ. ನಗದನ್ನು ಜಮೀರ್ ಅಹ್ಮದ್ ಖಾನ್ ಅವರಿಗೆ ಪಾವತಿ ಮಾಡಿರುವುದಾಗಿ ಮನ್ಸೂರ್ ಅಲಿಖಾನ್ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ತಿಳಿಸಿದ್ದರು. ಇದಾದ ಬಳಿಕ ಎಸಿಬಿ ಅಧಿಕಾರಿಗಳು ಇಡಿ ವರದಿಯನ್ನು ಆಧರಿಸಿ ಜಮೀರ್ ಅಹ್ಮದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಜಮೀರ್ ಅಹ್ಮದ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾಥಮಿಕ ತನಿಖಾ ವರದಿ ಹಾಗೂ ಮೂಲ ವರದಿ ಇಲ್ಲದೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇಡಿ ಸಿದ್ಧಪಡಿಸಿರುವ ವರದಿಯು ಕ್ರಿಮಿನಲ್ ಪ್ರಕರಣದ ದಾಖಲಿಸುವುದಕ್ಕೆ ಆಧಾರವಾಗುವುದಿಲ್ಲ. ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಚಿತ್ರದುರ್ಗ ಮುರುಘಾಶ್ರೀ ವಿರುದ್ಧ ಮತ್ತೆ ಬಂಧನ ವಾರೆಂಟ್: ದಾವಣಗೆರೆ ವಿರಕ್ತ ಮಠದತ್ತ ಭಕ್ತರ ದಂಡು