ಬೆಂಗಳೂರು : ಪೊಲೀಸ್ ಠಾಣೆಗೆ ದೂರು ನೀಡಲು ಬಂದ ಯುವತಿಯನ್ನು ಪರಿಚಯಿಸಿಕೊಂಡು, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪಕ್ಕೆ ಸಿಲುಕಿರುವ ಸಬ್ ಇನ್ಸ್ಪೆಕ್ಟರ್ಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ.
ಮಹತ್ವದ ತೀರ್ಪು ನೀಡಿದ ಹೈಕೋರ್ಟ್ ಪೀಠ
ಪ್ರಕರಣದಲ್ಲಿ ಆರೋಪಿ ಪಿಎಸ್ಐ ವಿಶ್ವನಾಥ್ ಬಿರಾದಾರ್ಗೆ ದಕ್ಷಿಣ ಕನ್ನಡ ಜಿಲ್ಲೆಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕೆಂದು ಕೋರಿ ಪ್ರಕರಣದ ಸಂತ್ರಸ್ತೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಆರೋಪಿ ಪಿಎಸ್ಐ ವಿಶ್ವನಾಥ್ ಬಿರಾದಾರ್ನನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದೆ.
ಯುವತಿ ದೂರು ನೀಡಿದರೂ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ, ಆತನಿಗೆ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್, ಪಿಎಸ್ಐ ಪವನ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ನೀಡಬೇಕು. ಪ್ರಕರಣವನ್ನು ಸ್ಥಳೀಯ ಪೊಲೀಸರು ಸರಿಯಾಗಿ ನಿಭಾಯಿಸಿಲ್ಲ. ಆರೋಪಿ ವಿರುದ್ಧ ಗಂಭೀರ ಸ್ವರೂಪದ ದೂರು ನೀಡಿದರೂ, ಆತನನ್ನು ಬಂಧಿಸಿಲ್ಲ. ಬದಲಿಗೆ ನೆರವು ನೀಡಿದ್ದಾರೆಂದು ಅಭಿಪ್ರಾಯಪಟ್ಟಿರುವ ಪೀಠ, ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರ ಬದಲಿಗೆ ಸಿಒಡಿ ತನಿಖೆ ಮಾಡಬೇಕು. ಅಧಿಕಾರಿಗಳು ತನಿಖೆ ನಡೆಸಿ ಮುಂದಿನ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ: coronavirus: ವಿವಿಧ ಜಿಲ್ಲೆಗಳ ಜನ ಪ್ರತಿನಿಧಿಗಳೊಂದಿಗೆ ಸಿಎಂ ಇಂದು ವಿಡಿಯೋ ಸಂವಾದ
ಸಂತ್ರಸ್ತೆಯ ಆರೋಪ: ಸಂತ್ರಸ್ತ ಯುವತಿ ಬೆಂಗಳೂರು ನಿವಾಸಿಯಾಗಿದ್ದು, ತನ್ನ ಲ್ಯಾಪ್ಟಾಪ್ ಕಳೆದುಹೋಗಿರುವುದಕ್ಕೆ ಸಂಬಂಧಿಸಿದಂತೆ 2020ರ ಆಗಸ್ಟ್ನಲ್ಲಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ಪಿಐಎಸ್ ವಿಶ್ವನಾಥ್ ಬಿರಾದಾರ್ ಯುವತಿ ಮೊಬೈಲ್ ನಂಬರ್ ಪಡೆದು ರಾತ್ರಿ ವೇಳೆ ಸಂದೇಶ ಕಳುಹಿಸಿ ಪ್ರೀತಿಸುತ್ತಿರುವುದಾಗಿ ತಿಳಿಸಿದ್ದ. ಇದರ ಜತೆಗೆ 12 ಲಕ್ಷ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಯುವತಿ ಈ ಕೋರಿಕೆಯನ್ನು ನಿರಾಕರಿಸಿದ್ದರಂತೆ. ಆ ನಂತರವೂ ತನಿಖೆ ನೆಪದಲ್ಲಿ ಕರೆದು ಮದುವೆಯಾಗುವ ಪ್ರಸ್ತಾಪ ಮಾಡಿ, ಪೋಷಕರನ್ನು ಭೇಟಿ ಮಾಡಿಸಲು ಮನೆಗೆ ಕರೆದೊಯ್ದು ಲೈಂಗಿಕ ಚೇಷ್ಟೆ ಮಾಡಿದ್ದರು ಎಂದು ಯುವತಿ ಆರೋಪಿಸಿದ್ದರು.
ಅಲ್ಲದೇ, ಮದುವೆಯಾಗುವುದಾಗಿ ನಂಬಿಸಿ ಧರ್ಮಸ್ಥಳಕ್ಕೆ ಕರೆದೊಯ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿರುವ ಯುವತಿ, ದೈಹಿಕ ಸಂಪರ್ಕದ ಬಳಿಕ ಆರೋಪಿ ತನಗೆ 2019ರಲ್ಲಿ ಇನ್ನೊಂದು ಮದುವೆಯಾಗಿದೆ ಎಂದು ಹೇಳಿದ್ದನು. ಈ ಹಿನ್ನೆಯಲ್ಲಿ ನಂಬಿಸಿ ಮೋಸ ಮಾಡಿದ ಆರೋಪಿ ವಿರುದ್ಧ ಕೂಡಲೇ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದೆ. ಆದರೆ, ಅವರು ನನ್ನ ರಕ್ಷಣೆಗೆ ಬರುವ ಬದಲು ಆರೋಪಿಗೆ ನೆರವು ನೀಡಿದರು. ಅಲ್ಲಿನ ಪೊಲೀಸರು ನನಗೆ ಕಿರುಕುಳ ನೀಡಿದರು ಎಂದು ಸಂತ್ರಸ್ತೆ ಅರ್ಜಿಯಲ್ಲಿ ದೂರಿದ್ದಾರೆ.