ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಮುಚ್ಚಿಟ್ಟ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತಿ ಕಾನಕಾನಹಳ್ಳಿ ವಾರ್ಡ್ ಸದಸ್ಯ ವಿನೋದ್ ಗಣಪತಿ ಭಟ್ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಅಂಕೋಲಾ ತಾಲೂಕಿನ ಹೆಗ್ಗಾರ ಪೋಸ್ಟ್‌ನ ರಾಘವೇಂದ್ರ ಎಂ. ಗಾಂವಕರ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಪ್ರತಿವಾದಿಗಳಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಹಾಗೂ ವಿನೋದ್ ಗಣಪತಿ ಭಟ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು 3 ವಾರ ಮುಂದೂಡಿತು.
ಅರ್ಜಿದಾರರ ಆಕ್ಷೇಪವೇನು?: ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕಾನಹಳ್ಳಿ ವಾರ್ಡ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದ ವಿನೋದ್ ಗಣಪತಿ ಭಟ್, 2020ರ ಡಿ.11ರಂದು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ, ಯಲ್ಲಾಪುರ ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದ ಬಗ್ಗೆ ಪ್ರಮಾಣಪತ್ರದಲ್ಲಿ ಬಹಿರಂಗಪಡಿಸಿಲ್ಲ.
ಇದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಸೆಕ್ಷನ್ 43 (ಬಿ)(4)ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಜತೆಗೆ, ವಿನೋದ್ ಗಣಪತಿ ಭಟ್ ವಿರುದ್ಧ ಕರ್ನಾಟಕ ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪಗಳಿವೆ. ಈ ಕಾರಣದಿಂದ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ.
ಈ ಕುರಿತು ರಾಜ್ಯ ಚುನಾವಣಾ ಆಯೋಗ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಅವರನ್ನು ಸದಸ್ಯ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಬಿಎಂಟಿಸಿ ಹೊಸದಾಗಿ ಬಸ್ ಖರೀದಿ ಟೆಂಡರ್ ಪ್ರಶ್ನಿಸಿದ್ದ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್