ಬೆಂಗಳೂರು: ಮದ್ಯದ ಅಮಲಿನಲ್ಲಿ ದುರ್ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ಹೆಸರನ್ನು ಕೂಗಿ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ಮಾತನಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಈ ಕುರಿತು ಎಎಸ್ಐ ಗೌಸ್ ಪಾಷಾ ದೂರು ನೀಡಿದ್ದರು.
ಅಕ್ಟೋಬರ್ 25ರಂದು ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಘಟನೆ ನಡೆದಿತ್ತು. ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಚಾಲನೆ ಮಾಡುತ್ತಿದ್ದ ಆ್ಯಡಂ ಅವರನ್ನು ಕಂಡು ಹಿಂದೆಯಿಂದ ತನ್ನ ಕಾರಿನಲ್ಲಿ ಬರುತ್ತಿದ್ದ ರಾಹುಲ್ ಎಂಬಾತ ಹಾರ್ನ್ ಮಾಡಿ ಮುಂದೆ ತೆರಳಿದ್ದರು. ಇದರಿಂದ ಕೋಪಗೊಂಡು, ತನ್ನ ಕಾರಿನಲ್ಲಿ ಓವರ್‌ಟೇಕ್ ಮಾಡಿಕೊಂಡು ಬಂದು ಯಲಹಂಕದ ರೈಲ್ವೆ ವೀಲ್ ಫ್ಯಾಕ್ಟರಿ ಬಳಿ ಅಡ್ಡಗಟ್ಟಿದ್ದ ಆ್ಯಡಂ ಗಲಾಟೆ ಆರಂಭಿಸಿದ್ದರು. ಕೂಡಲೇ ರಾಹುಲ್ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೊಂದಿಗೂ ವಾಗ್ವಾದ ನಡೆಸಿದ ಆ್ಯಡಂ ಬಿದ್ದಪ್ಪ, "ನನಗೆ ಪ್ರಭಾವಿ ವ್ಯಕ್ತಿಗಳು ಗೊತ್ತು" ಎಂದು ರಾಹುಲ್ಗೆ ಜೀವ ಬೆದರಿಕೆ ಹಾಕಿದ್ದರು.
ಅಷ್ಟರಲ್ಲಾಗಲೇ ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರು ಆ್ಯಡಂ ಅವರ ಕಾರು ವಶಕ್ಕೆ ಪಡೆದಿದ್ದರು. ಇದೇ ಸಂದರ್ಭದಲ್ಲಿ ಎಎಸ್ಐ ಸಮವಸ್ತ್ರದಲ್ಲಿದ್ದ ನಾಮಫಲಕ ಗಮನಿಸಿದ್ದ ಆ್ಯಡಂ, ಅವರ ಹೆಸರನ್ನೂ ಕೂಗಿ, ಅಸಭ್ಯವಾಗಿ ಮಾತನಾಡಿದ್ದರು. ಅಲ್ಲದೇ "ಸ್ಟೇಷನ್ಗೆ ಬರ್ತೀನಿ, ಏನ್ ಮಾಡಿಕೊಳ್ತಿರೋ ಮಾಡ್ಕೊಳಿ" ಎಂದು ಉದ್ಧಟತನದಲ್ಲಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಳಿಕ ಆ್ಯಡಂ ಬಿದ್ದಪ್ಪ ಅವರನ್ನು ವಶಕ್ಕೆ ಪಡೆದ ಯಲಹಂಕ ನ್ಯೂಟೌನ್ ಪೊಲೀಸರು, ರಾಹುಲ್ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ನಂತರ ಠಾಣಾ ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಳಿಸಿದ್ದರು. ಸದ್ಯ ಎಎಸ್ಐ ದೂರಿನ ಮೇರೆಗೆ ಆ್ಯಡಂ ಬಿದ್ದಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಟಿ ಸಂಜನಾ ಗಲ್ರಾನಿಯೊಂದಿಗೆ ಕಿರಿಕ್: ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಆರೋಪದಡಿ ಕಳೆದ ವರ್ಷ ಮಾರ್ಚ್‌ನಲ್ಲಿ ಆ್ಯಡಂ ಬಿದ್ದಪ್ಪರನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದರು. ಫೆಬ್ರವರಿ 25ರಂದು ರಾತ್ರಿ 10ರಿಂದ 12 ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಸಂದೇಶ ಕಳಿಸಿದ್ದ ಎಂದು ಆರೋಪಿಸಿ ಇಂದಿರಾ ನಗರ ಠಾಣೆಗೆ ಸಂಜನಾ ಗಲ್ರಾನಿ ದೂರು ಕೊಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರು: ಆಧಾರ್ ಸಂಖ್ಯೆ, ಬೆರಳಚ್ಚು ಸಂಗ್ರಹಿಸಿ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದ ಇಬ್ಬರು ವಂಚಕರು ಸೆರೆ