ಬೆಂಗಳೂರು: ಆ ದಿನಗಳು ಚಿತ್ರದ ನಟ ಚೇತನ್ ವಿರುದ್ಧ ಬಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಬ್ರಾಹ್ಮಣರ ಬಗ್ಗೆ ನಟ ಚೇತನ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಈ ದೂರು ನೀಡಲಾಗಿದೆ. ಬ್ರಾಹ್ಮಣಿಕೆ ಮತ್ತು ಬ್ರಾಹ್ಮಣತ್ವ ಭಯೋತ್ಪಾದಕತೆ ಎಂಬ ರೀತಿಯಲ್ಲಿ ಚೇತನ್ ಮಾತನಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಇಂತಹ ಅವಹೇಳನಕಾರಿ ಹೇಳಿಕೆಯಿಂದ ಬ್ರಾಹ್ಮಣ ಸಮುದಾಯಕ್ಕೆ ತುಂಬಾ ನೋವಾಗಿದೆ. ಹೀಗಾಗಿ ನಟ ಚೇತನ್ ಬ್ರಾಹ್ಮಣ ಸಮುದಾಯದ ಬೇಷರತ್ ಕ್ಷಮೆ ಕೇಳಬೇಕು ಮತ್ತು ಚೇತನ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಬ್ರಾಹ್ಮಣ ಸಮಾಜವನ್ನು ಭಯೋತ್ಪಾದಕರ ಜೊತೆ ಹೋಲಿಕೆ ಮಾಡಿ ಮಾತನಾಡಿರುತ್ತಾರೆ. ಇದು ನಾಡಿನಲ್ಲಿ ಅಶಾಂತಿಗೆ ಕಾರಣವಾಗಬಹುದಾಗಿದ್ದು, ಹೇಳಿಕೆಗಳನ್ನು ಖಂಡಿಸುತ್ತಾ ತಕ್ಷಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಅಖಿಲ ಹವ್ಯಕ ಮಹಾಸಭಾ ಆಗ್ರಹಿಸಿದೆ.
ಭಾರತೀಯ ಪರಂಪರೆ ಹಾಗೂ ಬ್ರಾಹ್ಮಣ ಸಮಾಜದ ಕುರಿತಾಗಿ ಚೇತನ್ ಅವಹೇಳನಕಾರಿಯಾಗಿ ಮಾತನಾಡಿರುವುದು ಸಮಸ್ತ ಸಮಾಜಕ್ಕೆ ಬೇಸರವನ್ನುಂಟು ಮಾಡಿದೆ. ಪ್ರಚಾರಕ್ಕೋಸ್ಕರವಾಗಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಹೇಳಿಕೆಗಳು ಶಿಕ್ಷಾರ್ಹವಾಗಿದೆ. ಚೇತನ್ ಈ ತಕ್ಷಣ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಗೆ ಧಕ್ಕೆತರುವ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನ ಕಾರ್ಯದರ್ಶಿಗಳಾದ ವೇಣುವಿಘ್ನೇಶ್ ಸಂಪ ತಿಳಿಸಿದ್ದಾರೆ. ಸರ್ಕಾರವು ಈ ಕುರಿತು ಗಮನ ಹರಿಸಬೇಕಾಗಿದ್ದು, ಸಮಾಜದ ಸ್ವಾಸ್ಥ್ಯ ಕದಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಆಗ್ರಹಿಸುತ್ತೇವೆ ಎಂದೂ ಕೇಳಿಕೊಂಡಿದ್ದಾರೆ.