ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರ ಅವಹೇಳನ ಆರೋಪದಡಿ ಅಖಿಲ ಕರ್ನಾಟಕ ಉಮಾಪತಿ ಗೌಡ ಅಭಿಮಾನಿಗಳ ಸಂಘದ ಇಬ್ಬರ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನ್ ಗೌಡ ಹಾಗೂ ಮಂಜು ದರ್ಶನ್ ಎಂಬ ಇಬ್ಬರ ವಿರುದ್ಧ ಸಂದೀಪ್ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಶಾಸಕ ಸತೀಶ್ ರೆಡ್ಡಿಯವರ ಈ ಹಿಂದಿನ ಮಾದ್ಯಮ ಸಂದರ್ಶನವೊಂದರ ವಿಡಿಯೋ ತುಣುಕುಗಳನ್ನ ತಿರುಚಿ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ಆ ಮೂಲಕ ಶಾಸಕರ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಉಮಾಪತಿ ಗೌಡ ಅಭಿಮಾನಿಗಳ ಸಂಘದ ಸಾಮಾಜಿಕ ಜಾಲತಾಣದ ಖಾತೆಗಳನ್ನ ನಿರ್ವಹಿಸುತ್ತಿರುವ ಚೇತನ್ ಗೌಡ ಹಾಗೂ ಮಂಜು ದರ್ಶನ್ ಎಂಬುವವರ ವಿರುದ್ಧ ದೂರಿನಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂದೀಪ್ ಎಂಬಾತ ನೀಡಿರುವ ದೂರಿನನ್ವಯ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![FIR Copy](https://etvbharatimages.akamaized.net/etvbharat/prod-images/17418868_1071_17418868_1673064264121.png)
ಸ್ಯಾಂಡಲ್ ವುಡ್ ನಿರ್ಮಾಪಕರಾಗಿರುವ ಉಮಾಪತಿ ಗೌಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಉಮಾಪತಿ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಸಿದ್ಧ ನಿರ್ಮಾಪಕ. ರಾಬರ್ಟ್, ಹೆಬ್ಬುಲಿ, ಮದಗಜ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಉದ್ಯಮಿಯಾಗಿ, ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್, ಕಳೆದ ವರ್ಷ ದರ್ಶನ್ ವಿಚಾರಕ್ಕೆ ಸುದ್ದಿಯಾಗಿದ್ದರು.
ಇದನ್ನೂ ಓದಿ: ₹175 ಕೋಟಿ ವೆಚ್ಚದ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಕೈ ಹಾಕಿದ ರಾಬರ್ಟ್ ಚಿತ್ರದ ನಿರ್ಮಾಪಕ