ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ, ಅಕಾಡೆಮಿ ಹಣದಲ್ಲಿ ದುಂದುವೆಚ್ಚ ಮಾಡಿದ್ದಾರೆ. ಅದರ 30 ಲಕ್ಷ ರೂ. ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು ಎಂಬ ಅಕಾಡೆಮಿಯ ಶಿಸ್ತು ಸಮಿತಿ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್ನ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವೂ ಎತ್ತಿ ಹಿಡಿದಿದೆ.
ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಿಂದಾಗಿ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಕಾನೂನು ಸಮರದಲ್ಲಿ ಗೆಲುವು ಸಿಕ್ಕಂತಾಗಿದೆ. ಶಿಸ್ತು ಸಮಿತಿ ಆದೇಶ ಪ್ರಶ್ನಿಸಿ ಅಗ್ರಹಾರ ಕೃಷ್ಣಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಬಿ ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಗ್ರಾಮಸ್ಥರೊಂದಿಗೆ ಕಂದಾಯ ನಿರೀಕ್ಷಕ ಅನುಚಿತ ವರ್ತನೆ ಆರೋಪ : ಕ್ರಮ ಜರುಗಿಸಲು ಡಿಸಿಗೆ ಹೈಕೋರ್ಟ್ ಸೂಚನೆ
ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್. ಸುಜಾತ ಹಾಗೂ ನ್ಯಾ.ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠವು, ಸಾಹಿತಿ ಕಂಬಾರರ ಮೇಲ್ಮನವಿ ವಜಾಗೊಳಿಸಿ ಏಕಸದಸ್ಯ ಪೀಠದ ಆದೇಶ ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ:
ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಕಾಡೆಮಿ ಕಾರ್ಯಕ್ರಮಗಳಿಗೆ ನಿಗದಿಗಿಂತಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ. ದೆಹಲಿಯಲ್ಲಿ ಕಚೇರಿ ಹೊಂದಿದ್ದು, ಮೇಲಿಂದ ಮೇಲೆ ಬೆಂಗಳೂರಿಗೆ ಅಧಿಕೃತ ಪ್ರವಾಸ ಕೈಗೊಂಡು ಅಕಾಡೆಮಿಯ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿತ್ತು. ಈ ಕುರಿತಂತೆ ಶಿಸ್ತು ಸಮಿತಿ 2014ರ ಜೂನ್ 3ರಂದು 30 ಲಕ್ಷ ನಷ್ಟ ಭರ್ತಿ ಪಾವತಿಸುವಂತೆ ಕೃಷ್ಣಮೂರ್ತಿ ಅವರಿಗೆ ಆದೇಶಿಸಿತ್ತು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶಿಸ್ತು ಸಮಿತಿಯ ಆದೇಶ ಪ್ರಶ್ನಿಸಿ ಕೃಷ್ಣಮೂರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕದಸ್ಯ ಪೀಠ, ಶಿಸ್ತು ಸಮಿತಿ ಆದೇಶ ನೀಡುವ ಮುನ್ನ ನಡೆಸಿರುವ ವಿಚಾರಣಾ ಪ್ರಕ್ರಿಯೆ ಸರಿಯಿಲ್ಲ. ಹಾಗೆಯೇ ಬೈ ಲಾ ಪ್ರಕಾರ ನಿವೃತ್ತಿ ಹೊಂದಿದವರ ವಿರುದ್ಧ ಕ್ರಮ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶಿಸಿತ್ತು.