ಬೆಂಗಳೂರು: ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ, ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ. ಬೆಸ್ಕಾಂ ಎಚ್ಎಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೇಶ್ ಹಾಗೂ ಆರೋಗ್ಯಭವನದ ಪ್ರಥಮ ದರ್ಜೆ ಸಹಾಯಕ ಸುಮಂತ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಗಳಾಗಿದ್ದಾರೆ.
ವಿದ್ಯುತ್ ಸಂಪರ್ಕ ಬದಲಾವಣೆಗೆ ವ್ಯಕ್ತಿಯೊಬ್ಬರಿಂದ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಬೆಸ್ಕಾಂ ಎಚ್ಎಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನರೇಶ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಗ್ಯಭವನದ ಪ್ರಥಮದರ್ಜೆ ಸಹಾಯಕ ಸುಮಂತ್ ಎಂಬುವರು ವ್ಯಕ್ತಿಯೊಬ್ಬರ ಪೆನ್ಷನ್ ಫೈಲ್ ಕ್ಲಿಯರ್ ಮಾಡಲು 1 ಲಕ್ಷಕ್ಕೆ ಬೇಡಿಕೆಯಿಟ್ಟು, 50 ಸಾವಿರ ರೂ. ಸ್ವೀಕರಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ
ಪೆನ್ಷನ್ ಫೈಲ್ ಕ್ಲಿಯರ್ ಮಾಡಲು 1 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿ ವಿರುದ್ಧ ನೊಂದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಡಿವೈಎಸ್ಪಿ ಸತೀಶ್ ಹಾಗೂ ಇನ್ಸ್ಪೆಕ್ಟರ್ ಸತೀಶ್ ನೇತೃತ್ವದ ತಂಡ ಕಚೇರಿಯಲ್ಲೇ, 50 ಸಾವಿರ ಲಂಚ ಸ್ವೀಕರಿಸುವಾಗ ಆರೋಪಿ ಸುಮಂತ್ ಅವರನ್ನು ವಶಕ್ಕೆ ಪಡೆದಿದ್ದಾರೆ.