ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13ರಿಂದ ಏರೋ ಇಂಡಿಯಾ 2023ಕ್ಕೆ ಪಾಲಿಕೆ ಎಲ್ಲ ರೀತಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಇಂದು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತುಷಾರ್ ಗಿರಿನಾಥ್ ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 17ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಏರ್ ಶೋ ವೇಳೆ ಸ್ವಚ್ಛತೆ, ಆಗಮಿಸುವ ನಾಗರಿಕರಿಗೆ ಶೌಚಾಲಯ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳನ್ನು ಬಿಬಿಎಂಪಿ ವತಿಯಿಂದ ಕಲ್ಪಿಸಲಾಗುತ್ತಿದೆ. ಈ ವೇಳೆ, ಯಲಹಂಕ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಈ ವ್ಯಾಪ್ತಿಯ ಮಾಂಸದಂಗಡಿಗಳನ್ನು ಮುಚ್ಚುವ ಸಂಬಂಧ ಅಧಿಕೃತ ಆದೇಶವನ್ನು ಶೀಘ್ರದಲ್ಲಿಯೇ ಹೊರಡಿಸಲಾಗುವುದು ಎಂದರು.
ರಸ್ತೆ ಅಗೆತ ಬಂದ್: ಈ ವರ್ಷದ ಅಕ್ಟೋಬರ್ ವರೆಗೂ ರಸ್ತೆಅಗೆಯುವ ಕುರಿತು ಯಾರಿಗೂ ಯಾವುದೇ ಆದೇಶವನ್ನು ನೀಡಿಲ್ಲ. ಆದರೂ ಕೆಲವೆಡೆ ರಸ್ತೆ ಅಗೆಯುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆ ಇಂಜಿನಿಯರ್ಗಳಿಗೆ ಎಚ್ಚರಿಕೆ ನೀಡಿ ವೇತನ ಕಡಿತಕ್ಕೆ ಸೂಚಿಸಲಾಗಿದೆ ಎಂದು ಈ ವೇಳೆ ಸುದ್ದಿಗಾರರ ಪ್ರೆಶ್ನೆಗೆ ಉತ್ತರಿಸಿದರು.
1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳು: ಏರೋ ಇಂಡಿಯಾ 2023 ಫೆಬ್ರವರಿ 13ರಂದು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರೀಕ ಸೌಲಭ್ಯಗಳನ್ನು ಕಲ್ಪಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಸಿದ್ಧತೆಯ ಭಾಗವಾಗಿ ಬಿಬಿಎಂಪಿಯು ನೀರಿನ ಟ್ಯಾಂಕರ್‌ಗಳು, ತಾತ್ಕಾಲಿಕ ಶೌಚಾಲಯಗಳು, ಆಟೋ ಟಿಪ್ಪರ್ ಕಾಂಪ್ಯಾಕ್ಟರ್‌ಗಳು, ಕಸದ ತೊಟ್ಟಿಗಳು ಮತ್ತು ಸೈನ್ ಬೋರ್ಡ್‌ಗಳ ಸ್ಥಾಪನೆಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. ಟೆಂಡರ್‌ಗಳನ್ನು ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.
ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾಕ್ಕಾಗಿ 1.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ, ತಾತ್ಕಾಲಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು, ಸಾರ್ವಜನಿಕ ಪಾರ್ಕಿಂಗ್ ಮತ್ತು ಮುಂಗಡ ಪಾರ್ಕಿಂಗ್ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳ ನಡೆಸಲಾಗುತ್ತಿದೆ ಎಂದು ಹೇಳಿದರು.
ನೀರು, ನೈರ್ಮಲ್ಯ, ಕಸ ನಿರ್ವಹಣೆ ಮತ್ತು ಸೂಚನಾ ಫಲಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಮೆಟಲ್ ಪ್ಲಾಟ್ ಫಾರ್ಮ್‌ಗಳಲ್ಲಿರುವ 500 ಮೊಬೈಲ್ ಶೌಚಾಲಯಗಳು, ನೀರಿನ ಸಂಪರ್ಕಗಳು ಮತ್ತು ಒಳಚರಂಡಿಗಾಗಿ ಪಿವಿಸಿ ಪೈಪ್‌ಗಳು, ಪಾಶ್ಚಾತ್ಯ ಶೈಲಿಯ ಕಮೋಡ್, ಫ್ಲಶ್ ಟ್ಯಾಂಕ್, 25 ಮೀಟರ್ ಎತ್ತರದಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕರ್‌ಗಳು, 36 ಆಟೋ ಟಿಪರ್‌ಗಳು, 6 ಕಾಂಪಾಕ್ಟರ್, 100 ಲೀಟರ್ ಸಾಮರ್ಥ್ಯದ 150 ಹಸಿರು ಮತ್ತು ನೀಲಿ ಕಸದ ತೊಟ್ಟಿಗಳು, 200 ಸೈನ್‌ಬೋರ್ಡ್‌ಗಳು ಮತ್ತು 180 ನೀರಿನ ಟ್ಯಾಂಕರ್‌ಗಳನ್ನು ಪಾಲಿಕೆ ಅಳವಡಿಸಲಿದೆ.
ಮಾಂಸಾಹಾರ ತಯಾರಿ ಮತ್ತು ಮಾರಾಟಕ್ಕೆ ನಿಷೇಧ: ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕ ವಲಯ ವ್ಯಾಪ್ತಿಯಲ್ಲಿ ಕೆಲ ದಿನಗಳವರೆಗೆ ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಯಲಹಂಕ ವಲಯ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ. ಅದೇ ರೀತಿ ಡಾಬಾ ಹಾಗೂ ಹೋಟೆಲ್ಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ನಿಷೇಧಿಸಲಾಗಿದೆ. ಪಾಲಿಕೆಯ ಆದೇಶ ಉಲ್ಲಂಘನೆಯಾದರೆ, ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ ನಿಯಮ 1937ರ ರೂಲ್ 91ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಯಲಹಂಕ ವಲಯದ ಜಂಟಿ ಆಯುಕ್ತೆ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 2023 ರ ಫೆಬ್ರವರಿ 13 ರಿಂದ 17 ರವೆಗೆ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿದೆ. ರಕ್ಷಣಾ ಸಚಿವಾಲಯ ಈ ಬಗ್ಗೆ ಅಧಿಕೃತವಾಗಿ ದಿನಾಂಕ ಪ್ರಕಟಿಸಿರುವುದರಿಂದ ಉತ್ತರ ಪ್ರದೇಶ ಅಥವಾ ಗೋವಾಗೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳಲಿದೆ ಎನ್ನುವ ಎಲ್ಲ ಅನುಮಾನಗಳಿಗೆ ತೆರೆ ಬಿದ್ದಿದೆ. ದೇಶ ವಿದೇಶಗಳ ನೂರಾರು ರಕ್ಷಣಾ ಉಪಕರಣಗಳ ತಯಾರಿಕ ಕಂಪನಿಗಳು ತಮ್ಮ ಉತ್ಪನ್ನ ಪ್ರದರ್ಶಿಸಲಿವೆ. ಅಷ್ಟೇ ಅಲ್ಲದೇ ಜಗತ್ತಿನ ದೇಶಗಳ ಎದುರು ತಮ್ಮ ದೇಶದಲ್ಲಿರುವ ರಕ್ಷಣಾ ಸಾಮರ್ಥ್ಯವನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ಕಲ್ಪಿಸಲಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ವೈಮಾನಿಕ ಪ್ರರ್ದಶನ ಕಳೆದ ಬಾರಿ ಕೋವಿಡ್ ಸೋಂಕು ಇದ್ದ ಕಾರಣ ಹೈಬ್ರಿಡ್ ಮಾದರಿಯಲ್ಲಿ ಸೀಮಿತ ಸಂಖ್ಯೆಯಲ್ಲಿ ನಡೆದಿತ್ತು. ಆದರೆ, ಈ ಬಾರಿ ಕೋವಿಡ್ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವನ್ನು ಅದ್ದೂರಿಯಾಗಿ ಪ್ರದರ್ಶಿಸಲು ಯಲಹಂಕದ ವಾಯು ನೆಲೆಯಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ:ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ: ಸಿಎಂ ಬೊಮ್ಮಾಯಿ ಭರವಸೆ