ಬೆಂಗಳೂರು: ಕೊರೊನಾ ಹಿನ್ನೆಲೆ 2020ರಲ್ಲಿ ನಡೆಯದೆ ಉಳಿದಿದ್ದ ಆಲ್ ಇಂಡಿಯಾ ಬಾರ್ ಪರೀಕ್ಷೆಗಳನ್ನು ಭಾರತೀಯ ವಕೀಲರ ಪರಿಷತ್ತು(ಬಿಸಿಐ) ಮುಂದಿನ ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಭಾರತೀಯ ವಕೀಲರ ಪರಿಷತ್ತು ಪ್ರಕಟಣೆ ಹೊರಡಿಸಿದ್ದು, ಅದರಂತೆ AIBE-XV ಪರೀಕ್ಷೆಗಳು ಈ ಮೊದಲೇ ನಿಗದಿಯಾಗಿರುವಂತೆ ಜನವರಿ 24ರಂದು ನಡೆಯಲಿದೆ. ಹಾಗೆಯೇ 2021ರ ಮಾರ್ಚ್ 21ರಂದು AIBE-XVI ಪರೀಕ್ಷೆಗಳು ನಡೆಯಲಿವೆ. ಈ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿಐ ಸ್ಪಷ್ಟಪಡಿಸಿದೆ.
2021ರ ಮಾರ್ಚ್ 21ರಂದು ನಡೆಯಲಿರುವ AIBE-XVI ಪರೀಕ್ಷೆಗೆ 2020ರ ಡಿಸೆಂಬರ್ 26ರಿಂದ 2021ರ ಫೆಬ್ರವರಿ 21ರ ವರೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಪರೀಕ್ಷೆಗೆ ಫೆಬ್ರವರಿ 23ರೊಳಗೆ ಪರೀಕ್ಷಾ ಶುಲ್ಕ ಕಟ್ಟಿ, 26ರೊಳಗೆ ಆನ್ಲೈನ್ ಅರ್ಜಿಯನ್ನು ಪೂರ್ತಿಯಾಗಿ ಭರ್ತಿ ಮಾಡಬೇಕಿದೆ. ಹಾಗೆಯೇ ಮಾರ್ಚ್ 6ರಿಂದ ಆನ್ಲೈನ್ ಮೂಲಕವೇ ಪರೀಕ್ಷಾ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಲು ಅವಕಾಶವಿದ್ದು, ಮಾರ್ಚ್ 21ರಂದು ಪರೀಕ್ಷೆ ನಡೆಯಲಿವೆ.
2021ರ ಜನವರಿ 24ರಂದು ನಡೆಯಲಿರುವ ಎಐಬಿಇ ಪರೀಕ್ಷೆಗೆ ಒಂದು ಲಕ್ಷಕ್ಕೂ ಅಧಿಕ ವಕೀಲರು ಆನ್ಲೈನ್ ಮೂಲಕ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ದೇಶದ ಒಟ್ಟು 50 ನಗರಗಳ 140 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಬಿಸಿಐ ಜಂಟಿ ಕಾರ್ಯದರ್ಶಿ ಅಶೋಕ್ ಕೆ. ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಜನವರಿ - ಫೆಬ್ರವರಿಯಲ್ಲಿ ಸಿಬಿಎಸ್ಇ ಪರೀಕ್ಷೆ ನಡೆಸುವುದಿಲ್ಲ : ರಮೇಶ್ ಪೋಖ್ರಿಯಾಲ್ ಸ್ಷಷ್ಟನೆ