ಬೆಂಗಳೂರು: ರಷ್ಯಾ ನಡೆಸಿರುವ ಶೆಲ್ ದಾಳಿಯಲ್ಲಿ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ಉಕ್ರೇನ್ನ ಖಾರ್ಕಿವ್‌ನಲ್ಲಿ ಸಾವನ್ನಪ್ಪಿದ್ದು, ಮಾಹಿತಿ ಗೊತ್ತಾಗುತ್ತಿದ್ದಂತೆ ನವೀನ್ ಅವರ ತಂದೆಗೆ ಕರೆ ಮಾಡಿರುವ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ನವೀನ್ ಗ್ಯಾನಗೌಡರ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾಗಿ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಮೃತ ಮಗನ ಬಗ್ಗೆ ಮಾಹಿತಿ ನೀಡಿದ ತಂದೆ ಶೇಖರಗೌಡ ಗ್ಯಾನಗೌಡರ್, ಇಂದು ಮುಂಜಾನೆ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತನಾಡುತ್ತಿದ್ದನು ಎಂದು ವಿವರಿಸಿದರು. ನವೀನ್ ಸಾವು ಅತ್ಯಂತ ದುರಾದೃಷ್ಟಕರ. ಭಗವಂತ ನವೀನ್ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ನವೀನ್ ಜೊತೆಗೆ ಇಬ್ಬರು ವಿದ್ಯಾರ್ಥಿಗಳಿದ್ದು, ಎಲ್ಲರೂ ಹೊರಗಡೆ ಬಂದು ಭಾರತೀಯರನ್ನು ಕೂಡಿಕೊಳ್ಳಲು ಮುಂದಾಗಿದ್ದ ವೇಳೆ ಶೆಲ್ ದಾಳಿ ನಡೆದಿದೆ. ಪರಿಣಾಮ ನವೀನ್ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾಗಿ ಸಿಎಂ ಬೊಮ್ಮಾಯಿ ಇದೇ ವೇಳೆ ಹೇಳಿದರು.
ಇದನ್ನೂ ಓದಿ: ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಕರುನಾಡ ವಿದ್ಯಾರ್ಥಿ ಬಲಿ.. ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಉಕ್ರೇನ್ನ ಖಾರ್ಕಿವ್‌ನಲ್ಲಿ ಎಂಬಿಬಿಎಸ್ 4ನೇ ಸೆಮಿಸ್ಟರ್ ವ್ಯಾಸಂಗ ಮಾಡ್ತಿದ್ದ ನವೀನ್, ಇಂದು ಬೆಳಗ್ಗೆ ಮನೆಗೆ ದಿನಸಿ ತರಲು ಹೊರಗಡೆ ಹೋದಾಗ, ರಷ್ಯಾ ಪಡೆ ನಡೆಸಿರುವ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.