ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗೌರವದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯದ ಜನರಿಟ್ಟಿರುವ ಅಲ್ಪ-ಸ್ವಲ್ಪ ಗೌರವ ಉಳಿಸಿಕೊಳ್ಳಲಿ ಎಂದು ಶಾಸಕ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ರಮಾಡ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಧ್ಯಮಗಳ ಮೂಲಕ ರಿವರ್ಸ್ ಆಪರೇಷನ್ ಎಂಬ ವದಂತಿ ಹಬ್ಬಿಸುತ್ತಿದ್ದೀರಿ. ಕೂಡಲೇ ನಿಮ್ಮ ಆಟ ನಿಲ್ಲಿಸಿ. ನಿಮ್ಮ ಸರ್ಕಾರದ ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಿದ್ದಾರೆ. ಇನ್ನು ನೀವು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕು ಇಲ್ಲ. ಹೀಗಾಗಿ ಈ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.
ನಮಗೆ ಸಂಸ್ಕಾರ - ಸಂಸ್ಕೃತಿ ಇದೆ. ಬಿಜೆಪಿ ಹಾಗೂ ಸಂಘ ಪರಿವಾರ ನಮಗೆ ಸಂಸ್ಕಾರ ಕಲಿಸಿದೆ. ಬಿಜೆಪಿಯ ಎಲ್ಲಾ ಶಾಸಕರು ಸಿಂಹದ ಮರಿಗಳಂತೆ ಒಟ್ಟಾಗಿದ್ದೇವೆ. ಯಾವುದೇ ಆಪರೇಷನ್ಗೆ ಒಳಗಾಗುವ ಮಾತೇ ಇಲ್ಲ. ರಿವರ್ಸ್ ಆಪರೇಷನ್ ಎಂಬುದು ಮಖ್ಯಮಂತ್ರಿ ಕುಮಾರಸ್ವಾಮಿ ಸೃಷ್ಟಿ. ಎಲ್ಲರೂ ಒಂದೆಡೆ ಇರಬೇಕೆಂಬ ನಿಟ್ಟಿನಲ್ಲಿ ಇಂದು ಮತ್ತು ನಾಳೆ ರೆಸಾರ್ಟ್ನಲ್ಲೆ ವಾಸ್ತವ್ಯ ಇರುತ್ತೇವೆ. ಸೋಮವಾರ ಇಲ್ಲಿಂದ ನೇರವಾಗಿ ವಿಧಾನಸೌಧದ ಅಧಿವೇಶನದಲ್ಲಿ ಭಾಗವಹಿಸುತ್ತೇವೆ ಎಂದರು.
ವಾಮಾಚಾರಿ ರೇವಣ್ಣ:
ವಾಮಾಚಾರ ಮಾರ್ಗದಿಂದ ಎಲ್ಲವನ್ನೂ ಸಾಧಿಸುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ. ನಿಂಬೆಹಣ್ಣು ರೇವಣ್ಣರ ವಾಮಾಚಾರಗಳು ಫಲ ನೀಡಲ್ಲ. ನಿಮ್ಮ ಕುಟುಂಬದ ಸಂಘರ್ಷದಿಂದ ಮಾಜಿ ಪ್ರಧಾನಿಗಳನ್ನು ಹಾಸನದಿಂದ ಓಡಿಸಿದ್ರಿ. ನಿಮ್ಮ ಕುಟುಂಬದ ಮಹಿಳೆಯರ ಸಂಘರ್ಷದಲ್ಲಿ ನಿಖಿಲ್ ಸೋತಿದ್ದಾರೆ ಎಂದು ರೇಣುಕಾಚಾರ್ಯ ಕುಹಕವಾಡಿದರು.