ಬೆಂಗಳೂರು: ಶಾಸಕರ ಪುತ್ರನ ಬಂಧನದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿದ್ದು, "ಕಾನೂನಿನ ಮುಂದೆ ಶಾಸಕರೇ ಆಗಲಿ, ಜನಸಾಮಾನ್ಯ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಯಾರೇ ಆಗಲಿ ಎಲ್ಲರೂ ಒಂದೇ. ಕಾನೂನಾತ್ಮಕವಾಗಿ ಏನು ಶಿಕ್ಷೆ ಆಗಬೇಕೋ ಅದು ಆಗಿಯೇ ಆಗುತ್ತದೆ. ತನಿಖಾ ಹಂತದ ಕುರಿತು ಈಗ ಚರ್ಚಿಸುವ ಅಗತ್ಯವಿಲ್ಲ. ನಮ್ಮ ಸಿಬ್ಬಂದಿಗೆ ಆ ಬಗ್ಗೆ ನನ್ನ ನಿರ್ದೇಶನದ ಅಗತ್ಯವೂ ಇಲ್ಲ" ಎಂದಿದ್ದಾರೆ.
"ದಾಳಿ ಸಂದರ್ಭದಲ್ಲಿ ಆರೋಪಿಯ ಬಳಿ 2 ಕೋಟಿ 2 ಲಕ್ಷ ರೂ ಹಾಗೂ ಆತನ ಮನೆಯಲ್ಲಿ ಶೋಧ ನಡೆಸಿದಾಗ 6 ಕೋಟಿ 10 ಲಕ್ಷ ರೂಪಾಯಿ ಹಣ ದೊರೆತಿದೆ. ಆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುತ್ತೇವೆ. ಸತ್ಯಾಸತ್ಯತೆ ಕುರಿತು ಮುಂದಿನ ತನಿಖೆ ಮಾಡಲಾಗುತ್ತದೆ. ಲಂಚ ಸ್ವೀಕರಿಸುತ್ತಿರುವ ಬಗ್ಗೆ ಮುಂದೆ ಬಂದು ದೂರು ನೀಡಿದವರು ಹಾಗೂ ಚಾಕಚಕ್ಯತೆಯಿಂದ ಕಾರ್ಯಾಚರಣೆ ಕೈಗೊಂಡ ನಮ್ಮ ಲೋಕಾಯುಕ್ತ ಸಿಬ್ಬಂದಿಯನ್ನು ಶ್ಲಾಘಿಸಬೇಕು."
"ಈಗ ಲಂಚ ಸ್ವೀಕರಿಸುತ್ತಿರುವ ಬಗ್ಗೆ ದೂರು ನೀಡಿದವರ ರೀತಿಯ ಧೈರ್ಯ ಎಲ್ಲ ಸಾರ್ವಜನಿಕರಲ್ಲಿ ಬರಬೇಕು. ಧೈರ್ಯವಾಗಿ ನಮ್ಮ ಮುಂದೆ ಬಂದಾಗ ಈ ರೀತಿಯ ಎಂಥ ತಿಮಿಂಗಿಲಗಳಾದರೂ ಹಿಡಿದು ಹಾಕಲು ಸಾಧ್ಯ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ. ಈ ಪ್ರಕರಣದಲ್ಲಿ ನಾವು ಈಗಾಗಲೇ ಐದು ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ದಾಳಿ ನಡೆಸಿದಾಗ ಲಂಚ ಸ್ವೀಕರಿಸುತ್ತಿದ್ದ ಪ್ರಶಾಂತ್ ಮಾಡಾಳ್ ಹಾಗೂ ಅವರ ಅಕೌಂಟೆಂಟ್ ಮತ್ತು ಅಲ್ಲಿ ಲಂಚ ನೀಡುತ್ತಿದ್ದ ಮೂರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಲಂಚ ನೀಡುವುದು ಕೂಡ ಅಪರಾಧವಾಗಿರುವುದರಿಂದ ಅವರನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದರು.
ವಿರೂಪಾಕ್ಷಪ್ಪ ಮಾಡಾಳ್ ಮೇಲೆ ಎಫ್ಐಆರ್ ದಾಖಲಾಗಿದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಿ.ಎಸ್.ಪಾಟೀಲ್, "ಯಾರು ಲಂಚ ಸ್ವೀಕರಿಸಿದ್ದಾರೆ. ಹಾಗೂ ಆ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದವರ ಎಲ್ಲರ ಮೇಲೂ ಎಫ್ಐಆರ್ ದಾಖಲು ಮಾಡಲಾಗುತ್ತದೆ ಮತ್ತು ವೆಬ್ಹೋಸ್ಟ್ ಕೂಡ ಮಾಡಲಾಗುತ್ತದೆ" ಎಂದು ತಿಳಿಸಿದರು.
"ಲಂಚಕ್ಕೆ ಬೇಡಿಕೆಯಿಡುವವನು ಎಂದಿದ್ದರೂ ಸಿಗಲೇಬೇಕು. ಆದರೆ ಸಾರ್ವಜನಿಕರು ಶೋಷಿತರಾಗಬೇಕಿಲ್ಲ. ಲೀಗಲ್ ಕೆಲಸ ಮಾಡಿಸಿಕೊಳ್ಳಲು ಇಲ್ಲೀಗಲ್ ಹಾದಿ ಹಿಡಿಯುವ ಅಗತ್ಯವಿಲ್ಲ. ಲೋಕಾಯುಕ್ತ ಪ್ರತಿಯೊಂದು ಜಿಲ್ಲೆಯಲ್ಲಿಯೂ ಇದೆ. ನ್ಯಾಯಾಲಯ ನಮಗೆ ಜವಾಬ್ದಾರಿಯನ್ನು ನೀಡಿದಂದಿನಿಂದಲೇ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲಾ ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸ್ ಕಚೇರಿ ಇದ್ದು, ಯಾರಾದರೂ ಲಂಚಕ್ಕೆ ಬೇಡಿ ಇಟ್ಟಿದ್ದಾರೆ ಎಂಬುದು ನಿಮಗೆ ತಿಳಿಯುತ್ತಿದ್ದಂತೆಯೇ ಲೋಕಾಯುಕ್ತದ ಸಹಾಯ ಪಡೆಯಿರಿ, ದೂರು ನೀಡಿ, ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ ಎಂದು ನ್ಯಾಯಮೂರ್ತಿಗಳು ಮನವಿ ಮಾಡಿದ್ದಾರೆ. ಬಹುತೇಕ ಎಲ್ಲಾ ಕಚೇರಿಗಳಲ್ಲೂ ಸಿಬ್ಬಂದಿ ನೇಮಕವಾಗಿದ್ದು, ಕೆಲವು ಕಡೆ ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಸಮಸ್ಯೆಯನ್ನು ಆದಷ್ಟು ಶೀಘ್ರದಲ್ಲಿ ಬಗೆಹರಿಸಲಾಗುವುದು" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ಮಾಡಾಳ್ ರಾಜೀನಾಮೆ