ಬೆಂಗಳೂರು: ಆಲಮಟ್ಟಿ-ಪೆನ್ನಾರ್ ನದಿ ಜೋಡಣೆ ಯೋಜನೆ ಬಗ್ಗೆ ಈಗಾಗಲೇ ಕರ್ನಾಟಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟೀಯ ಜಲ ಅಭಿವೃದ್ಧಿ ಸಂಸ್ಥೆಯು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆ ಮುಂದುವರೆಸಬಾರದು ಎಂದು ಕರ್ನಾಟಕ ಪ್ರತಿಪಾದಿಸಿತು. ಇಂದು ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟೀಯ ಜಲ ಅಭಿವೃದ್ಧಿ ಸಂಸ್ಥೆಯ 36ನೇ ವಾರ್ಷಿಕ ಸಾಮಾನ್ಯ ಸಭೆ ಮತ್ತು ನದಿ ಜೋಡಣೆ ವಿಶೇಷ ಸಮಿತಿ (SCILR) 20ನೇ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭಾಗವಹಿಸಿ ರಾಜ್ಯದ ನಿಲುವುಗಳನ್ನು ಪ್ರತಿಪಾದಿಸಿದರು.
ಕೃಷ್ಣಾ ಮತ್ತು ಕಾವೇರಿ ಕಣಿವೆಯಲ್ಲಿ ಮಹಾನದಿ ಮತ್ತು ಗೋದಾವರಿ ಕಣಿವೆ ನದಿ ಜೋಡಣೆಯ ಮೂಲಕ ನೀರು ತಿರುವುಗೊಳಿಸುವ ಯೋಜನೆಯಲ್ಲಿ ಕರ್ನಾಟಕದ ಪಾಲನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ಸಭೆಯ ಗಮನಕ್ಕೆ ತಂದರು. 2010ರಿಂದಲೂ ಕರ್ನಾಟಕ ಈ ಅನ್ಯಾಯವನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಮತ್ತು NWDAಯನ್ನು ಕೋರುತ್ತಿದೆ. ಈ ನಿಲುವನ್ನು ಕರ್ನಾಟಕದ ಮುಖ್ಯಮಂತ್ರಿಯವರು ದಕ್ಷಿಣ ರಾಜ್ಯಗಳ ಪರಿಷತ್ತಿನ ಸಭೆಗಳಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
ಗೋದಾವರಿ ಮತ್ತು ಕೃಷ್ಣಾ ಕಣಿವೆಗಳ ಸದ್ಯ ಚಾಲ್ತಿಯಲ್ಲಿರುವ ನ್ಯಾಯ ಮಂಡಳಿಯ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಮಹಾನದಿ ಮತ್ತು ಗೋದಾವರಿ ನದಿಗಳ ಹೆಚ್ಚುವರಿ ನೀರಿನ ಹಂಚಿಕೆಯನ್ನು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ 2015ರಲ್ಲಿ ಕರ್ನಾಟಕಕ್ಕೆ ತಿಳಿಸಿದೆ ಎಂದು ಕಾರಜೋಳ ವಿವರಿಸಿದರು. ಆದರೆ, ಕೇಂದ್ರ ಜಲಸಂಪನ್ಮೂಲ ಇಲಾಖೆ ಮತ್ತು NWDA ನೀಡಿದ ಭರವಸೆಯ ಹೊರತಾಗಿಯೂ ಗೋದಾವರಿ ಮತ್ತು ಕಾವೇರಿ ನದಿ ಜೋಡನೆ ಯೋಜನೆಯ ಡಿಪಿಆರ್‌ನಲ್ಲಿ ಗೋದಾವರಿ ಜಲಾನಯನದ ಹೆಚ್ಚುವರಿ ನೀರಿನಿಂದ ಕರ್ನಾಟಕ ರಾಜ್ಯಕ್ಕೆ ನ್ಯಾಯಸಮ್ಮತ ನೀರಿನ ಪ್ರಮಾಣವನ್ನು ಸೂಚಿಸಿಲ್ಲ/ಹಂಚಿಕೆ ಮಾಡಿದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ನಿಲುವನ್ನು ತಿಳಿಸಿದರು.
ಇದನ್ನೂ ಓದಿ: ಶೇಖಾವತ್ ಭೇಟಿಯಾದ ಕಾರಜೋಳ: ನೀರಾವರಿ ಯೋಜನೆಗಳ ಕುರಿತು ಮಾತುಕತೆ