ಬೆಂಗಳೂರು: ಸದ್ಯ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿದರೆ ಕಾಂಗ್ರೆಸ್ 130 ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, 2013-18ರವರೆಗೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಇದೀಗ ಜನರು ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ ಆಗಿದ್ದು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪಕ್ಷದ ನಾಯಕರು. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆಗೆ ಹೋದರೆ 130 ರಿಂದ 150 ಸೀಟ್ ಬರಲಿದೆ. ಹಾಗಾಗಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದರು.
ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಎಂದು ಘೋಷಿಸುವಂತೆ ಅವರ ಪರವಿರುವ ಕಾಂಗ್ರೆಸ್ ನಾಯಕರೆಲ್ಲ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಹೆಸರು ಘೋಷಿಸುವಂತೆ ಅವರ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.
ಕೋವಿಡ್ನಿಂದಾಗಿ ಹೈಕಮಾಂಡ್ ಭೇಟಿಯಾಗಿರಲಿಲ್ಲ. ನಮ್ಮ ಉಸ್ತುವಾರಿಗಳನ್ನು ಭೇಟಿ ಮಾಡಿ ಅವರಿಗೆ ಘಟನೆಯ ವಿವರಣೆ ಕೊಟ್ಟಿದ್ದೇನೆ. ಸಂಪತ್ ರಾಜ್ ವಿರುದ್ಧ ದೂರು ಕೊಟ್ಟಿದ್ದೇನೆ. ನನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಿದ್ದೇವೆ. ನಮ್ಮ ವಿರೋಧಿಗಳನ್ನು ಡಿಕೆಶಿ ಜೊತೆ ಸೇರಿಸಿಕೊಂಡು ಓಡಾಡ್ತಿದ್ದಾರೆ. ಸಿದ್ದರಾಮಯ್ಯ, ಜಮೀರ್ ನನ್ನ ಜೊತೆಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸಂಪತ್ ರಾಜ್ ಅವರನ್ನು ವಿಚಾರಿಸಲಿ:
ಕೆ ಜಿ ಹಳ್ಳಿ, ಡಿ ಜೆ ಹಳ್ಳಿಯಲ್ಲಿ ಗಲಭೆ ಆಯ್ತು. ಬೆಂಕಿ ಹಚ್ಚಿ ನಮ್ಮ ಮನೆಯನ್ನು ಸುಟ್ಟು ಹಾಕಿದ್ರು. ನಮ್ಮ ಕೆಪಿಸಿಸಿ ಅಧ್ಯಕ್ಷರು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆ ಕೊಟ್ಟಿಲ್ಲ. ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಉಚ್ಚಾಟಿಸಬೇಕೆಂದು ಕೆಪಿಸಿಸಿ ಅಧ್ಯಕ್ಷರಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಕ್ರಮಕ್ಕೆ ಆಗ್ರಹಿಸಿ ಮನವಿ ಮಾಡಿದ್ದೇನೆ. ಇಲ್ಲಿಯವರೆಗೆ ಅಧ್ಯಕ್ಷರು ಕ್ರಮ ತೆಗೆದುಕೊಂಡಿಲ್ಲ. ಪಕ್ಷದ ಯಾರೂ ಕೂಡ ನನ್ನ ಸಮಸ್ಯೆ ಕೇಳಿಲ್ಲ. ಒಬ್ಬ ಶಾಸಕನಾಗಿ ನಾನು ಬೀದಿಗೆ ಬಂದಿದ್ದೇನೆ. ಕೂಡಲೇ ಸಂಪತ್ ರಾಜ್ ಅನ್ನು ಸಸ್ಪೆಂಡ್ ಮಾಡಬೇಕು, ಯಾಕೆ ಉದಾಸೀನ ಮಾಡ್ತಿದ್ದಾರೋ ಗೊತ್ತಿಲ್ಲ ಎಂದು ವಿವರಿಸಿದರು.
ಟಿಕೆಟ್ ಸಿಗುವ ನಿರೀಕ್ಷೆ:
ನನಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟದ್ದು. ನನಗೆ ಟಿಕೆಟ್ ಕೊಡುವ ನಿರೀಕ್ಷೆಯಿದೆ. ಪ್ರಸನ್ನ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾದರು, ನನಗೆ ವಂಚನೆ ಆಗುವುದಿಲ್ಲ ಎಂಬ ನಿರೀಕ್ಷೆ ಇದೆ ಎಂದರು.
ಇದನ್ನೂ ಓದಿ: ಜುಲೈ ಮೊದಲ ವಾರ/ಎರಡನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ: ಡಿಸಿಎಂ ಅಶ್ವಥ್ ನಾರಾಯಣ್