ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ನಾಳೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರಿಂದ ಕರಾವಳಿಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ ಮಳೆಯಾಗಿದ್ದು, ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಕೆಲವು ಕಡೆ ಮಳೆಯಾಗಿದೆ. ಮುಖ್ಯವಾಗಿ ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ಹಾಗು ಕಮ್ಮಡಿಯಲ್ಲಿ ತಲಾ 1 ಸೆ.ಮೀ. ಮಳೆಯಾಗಿದೆ ಎಂದು ಹೇಳಿದ್ದಾರೆ.
ಈಗ ವಾಯುಭಾರ ಕುಸಿತ ಅರಬ್ಬೀ ಸಮುದ್ರದ ಆಗ್ನೇಯ ಭಾಗ ಹಾಗೂ ಹತ್ತಿರದ ನೈರುತ್ಯ ಭಾಗದಲ್ಲಿದ್ದು, 3.1 ಕಿ.ಮೀ. ಎತ್ತರದಲ್ಲಿ ಇದೆ ಎಂದು ತಿಳಿಸಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತೆ ನಾಳೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣ ಹವೆ ನವೆಂಬರ್ 20ರಿಂದ 22ರವರೆಗೆ ಇರಲಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ ನವೆಂಬರ್ 22ರವರೆಗೆ ಮಳೆಯಾಗುವ ಸಾಧ್ಯತೆ ಇದೆ.