ಬೆಂಗಳೂರು: ತಂತ್ರಜ್ಞಾನ ಹೆಚ್ಚಾದಂತೆ ಪರಿಸರದ ಮೇಲೆ ದುಷ್ಪರಿಣಾಮಗಳು ಜಾಸ್ತಿಯಾಗುತ್ತಿದ್ದು, ಇಂದು ಉಸಿರಾಡಲು ಶುದ್ಧಗಾಳಿಯೂ ಅಲಭ್ಯವಾಗುತ್ತಿದೆ. ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ, ಉಸಿರಾಟದ ತೊಂದರೆ, ಪಾರ್ಶ್ವವಾಯು ಹಾಗೂ ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ವಾಯು ಮಾಲಿನ್ಯವೇ ಪ್ರಮುಖ ಕಾರಣವಾಗಿದೆ.
ವಿಷಕಾರಿ ರಾಸಾಯನಿಕ ಚೆಲ್ಲುವ ಕಾರ್ಖಾನೆಗಳು, ಲಂಗು ಲಗಾಮಿಲ್ಲದ ಕಟ್ಟಡ ನಿರ್ಮಾಣ ಕಾಮಗಾರಿ, ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಏಳುವ ಧೂಳು, ವಾಹನಗಳು ಹೊರಸೂಸುವ ಇಂಗಾಲ, ಕಸ ಹಾಗೂ ತ್ಯಾಜ್ಯಕ್ಕೆ ಹಾಕುವ ಬೆಂಕಿಯಿಂದ ಮೇಲೇಳುವ ಹೊಗೆ, ಇವೆಲ್ಲದರ ಪರಿಣಾಮವಾಗಿ ಇಂದು ವಾಯುಮಾಲಿನ್ಯ ಗಂಡಾಂತರಕಾರಿಯಾಗಿ ಪರಿಣಮಿಸಿದೆ.
ಇನ್ನು ಲಾಕ್ಡೌನ್ ವೇಳೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ವಾಹನಗಳಿಂದ ಹೊರಬರುವ ಮಾಲಿನ್ಯವು ಸಂಪೂರ್ಣವಾಗಿ ನಿಂತು ಹೋಗಿತ್ತು. ಆದರೆ ಅನ್ಲಾಕ್ ಬಳಿಕ ಮತ್ತೆ ವಾಹನ ಸಂಚಾರ ಶುರುವಾಗಿದ್ದು, ವಾಯು ಮಾಲಿನ್ಯವು ಹೆಚ್ಚಾಗತೊಡಗಿದೆ.
ವಾಹನಗಳು ಹೊರಬಿಡುವ ಹೊಗೆಯಲ್ಲಿ ವಿಷಪೂರಿತ ಅನಿಲಗಳಾದ ಕಾರ್ಬನ್ ಮೊನೊಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜನ್ ಮತ್ತು ಹೈಡ್ರೋಕಾರ್ಬನ್ ತುಂಬಿ ನಾವು ಸೇವಿಸುವ ಗಾಳಿ ಮಲೀನವಾಗುತ್ತದೆ. ಇವುಗಳು ಪ್ರತಿದಿನ 10 ರಿಂದ 20 ಸಿಗರೇಟ್ ಸೇದುವಷ್ಟು ಹಾನಿಕಾರಕವಂತೆ. ಹಳೆ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟರೆ ಮತ್ತು ಸರ್ವಿಸಿಂಗ್ ಮಾಡಿಸಿಕೊಂಡರೆ ಇವುಗಳನ್ನು ನಿಯಂತ್ರಿಸಬಹುದು. ಅದಕ್ಕಾಗಿ ವಾಹನಗಳ ವಾಯುಮಾಲಿನ್ಯ ತಪಾಸಣೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಕಡ್ಡಾಯಗೊಳಿಸಲಾಗಿದೆ.
ಭಯಾನಕವಾಗಿ ಬೆಳೆಯುತ್ತಿರುವ ವಾಯುಮಾಲಿನ್ಯ ಪಿಡುಗನ್ನು ಹತೋಟಿಯಲ್ಲಿಡಲು ಎಲ್ಲರೂ ಕೈಜೋಡಿಸಬೇಕಾಗಿದೆ. ಒಟ್ಟಿನಲ್ಲಿ ಕೊರೊನಾ ಅನ್ಲಾಕ್ ಬಳಿಕ ವಾಹನ ವಾಯುಮಾಲಿನ್ಯವು ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ, ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ.
ಇನ್ನು ವಾಯು ಮಾಲಿನ್ಯ ನಿಯಂತ್ರಣ ಮಾಡಿದರೆ ಜನರ ಆರೋಗ್ಯ ಸುಧಾರಿಸುತ್ತದೆ. ಜನಸಮಾನ್ಯರ ಆರೋಗ್ಯ ಸುಧಾರಿಸಿದರೆ ದೇಶ ಬಲಿಷ್ಠವಾಗುತ್ತದೆ. ನಮ್ಮನ್ನಾಳುವ ಸರ್ಕಾರಗಳಿಗೆ ಸ್ಪಷ್ಟವಾದ ಪರಿಸರ ನೀತಿ ಇರಬೇಕು. ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಬೇಕು.