ಬೆಂಗಳೂರು : ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಜನ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ತರಾತುರಿಯಲ್ಲಿ ಮಂಡನೆ ಮಾಡಬಾರದು. ಇದಕ್ಕೂ ಮುನ್ನ ಮಸೂದೆ ಬಗ್ಗೆ ಸಂಬಂಧಪಟ್ಟ ವಿದ್ಯುತ್ ಇಂಜಿನಿಯರ್‌ಗಳು, ಜನಸಾಮಾನ್ಯರು, ರೈತರು, ವಿವಿಧ ಪಾಲುದಾರರ ಜೊತೆ ಸಮಾಲೋಚಿಸಬೇಕು ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಸರ್ಕಾರವನ್ನು ಆಗ್ರಹಿಸಿದೆ.
ನಗರದಲ್ಲಿ ಶನಿವಾರ ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಷನ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಮಸೂದೆ ಮಂಡಿಸಲು ಬಿಡಬಾರದು ಎಂಬ ನಿರ್ಣಯ ಕೈಗೊಂಡಿತು. ಇದರಿಂದ ಖಾಸಗಿ ವಲಯಕ್ಕೆ ಅನುಕೂಲವಾಗಲಿದ್ದು, ಗ್ರಾಹಕರು ಮತ್ತು ವಿದ್ಯುತ್ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ, ರೈತ ಸಮುದಾಯಕ್ಕೆ ಭಾರಿ ಅನ್ಯಾಯವಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಎಐಪಿಇಎಫ್ನ ಅಧ್ಯಕ್ಷ ಶೈಲೇಂದ್ರ ದುಬೆ ಮಾತನಾಡಿ, "ರೈತರೊಂದಿಗೆ ಚರ್ಚೆ ನಡೆಸಿದ ನಂತರವೇ ಮಸೂದೆ ಮಂಡಿಸುವುದಾಗಿ ಕೇಂದ್ರ ಸರ್ಕಾರ ಕಿಸಾನ್ ಮೋರ್ಚಾಗೆ ಪತ್ರ ಬರೆದಿದೆ. ಆದರೆ, ಮಸೂದೆ ಮಂಡನೆಗೆ ಸಂಪುಟದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ಇದರಿಂದ ವಿದ್ಯುತ್ ವಲಯದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿಲ್ಲ. ಹೊಸ ಮಸೂದೆಯಿಂದ ಸಬ್ಸಿಡಿ ರದ್ದಾಗಲಿದ್ದು, ಎಲ್ಲಾ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗುತ್ತದೆ. ರೈತರು ಪ್ರತಿ ತಿಂಗಳು ಕೃಷಿ ಪಂಪ್ ಸೆಟ್ಗೆ 10 ರಿಂದ 12 ಸಾವಿರ ರೂಪಾಯಿ ವಿದ್ಯುತ್ ಬಿಲ್ ಪಾವತಿಸುವ ಪರಿಸ್ಥಿತಿ ಎದುರಾಗಲಿದೆ" ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯುತ್ ಗ್ರಾಹಕರು, ಇಂಜಿನಿಯರ್‌ಗಳು, ಸಿಬ್ಬಂದಿ ಜೊತೆ ವಿಸ್ತೃತ ಸಮಾಲೋಚನೆ ನಡೆಸಬೇಕು. ಎಲ್ಲರ ಅಭಿಪ್ರಾಯ ಆಧರಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಇದಕ್ಕಾಗಿ ಮಸೂದೆಯನ್ನು ಸಂಸತ್ತಿನ ವಿದ್ಯುತ್ ವ್ಯವಹಾರಗಳ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು. ಸ್ಥಾಯಿ ಸಮಿತಿ ಎಲ್ಲಾ ಪಾಲುದಾರರ ಜೊತೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಪಡೆದು ನಂತರ ತಿದ್ದುಪಡಿ ಮಂಡಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ : 2003ರ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರ ಪ್ರತಿಭಟನೆ..
ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಇಂ.ಕೆ.ಶಿವಣ್ಣ ಮಾತನಾಡಿ, "ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡಿಸುವ ಕುರಿತಂತೆ ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು, ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದರಿಂದ ದೇಶಾದ್ಯಂತ ಇರುವ ಒಂದು ಲಕ್ಷಕ್ಕೂ ಅಧಿಕ ವಿದ್ಯುತ್ ಇಂಜಿನಿಯರ್ಗಳಿಗೆ ತೊಂದರೆ ಎದುರಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ವಿದ್ಯುತ್ ತಿದ್ದುಪಡಿ ಕಾಯ್ದೆಯ ಹಿಂದೆ ಖಾಸಗೀಕರಣದ ಹುನ್ನಾರವಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ಕಂಪನಿಗಳು ಖಾಸಗೀಕರಣಕ್ಕೆ ನೀಡಿದರೆ ವಿದ್ಯುತ್ ಶುಲ್ಕವು ಹೆಚ್ಚಾಗಲಿದ್ದು, ಜನ ಸಾಮಾನ್ಯರಿಗೆ ಹೊರೆ ಬೀಳಲಿದೆ" ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ : ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಕೊಕ್ಕೆ.. ಮೊದಲ ಮಹತ್ವದ ತೀರ್ಮಾನ!