ಬೆಂಗಳೂರು: ಅಗ್ರಿ ಗೋಲ್ಡ್ ಸಂಸ್ಥೆ ವಂಚನೆ ಸಂಬಂಧ ಅನ್ಯ ರಾಜ್ಯಗಳಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಅಲ್ಲಿಯೂ ವಿಚಾರಣೆ ನಡೆಯುತ್ತಿರುವುದರಿಂದ ಎಲ್ಲಾ ಪ್ರಕರಣಗಳ ವಿಚಾರಣೆಗೆ ಒಂದೇ ನ್ಯಾಯಾಲಯ ಸ್ಥಾಪಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಕ್ಷಮ ಪ್ರಾಧಿಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಅಗ್ರಿ ಗೋಲ್ಡ್ ಸಂಸ್ಥೆಯ ವಂಚನೆ ಪ್ರಕರಣ ಸಂಬಂಧ ಮಂಗಳೂರಿನ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಪ್ರಕರಣದ ಸಕ್ಷಮ ಪ್ರಾಧಿಕಾರಿ ಹರ್ಷ ಗುಪ್ತಾ ಹಾಜರಾಗಿ, ಅಗ್ರಿ ಗೋಲ್ಡ್ ಸಂಸ್ಥೆಯಲ್ಲಿ ಅಂದಾಜು 32 ಲಕ್ಷ ಹೂಡಿಕೆದಾರರಿದ್ದು, ರಾಜ್ಯದಲ್ಲಿ 8.8 ಲಕ್ಷ ಜನರು ಹಣ ಹೂಡಿಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯ ಅಲ್ಲಿನ ಸ್ಥಳೀಯ ನಿಯಮಗಳ ಪ್ರಕಾರ ಸಂಸ್ಥೆ ವಿರುದ್ಧ ಕ್ರಮ ಜರುಗಿಸಿದೆ. ಮೆಹಬೂಬ್ ನಗರದ ನ್ಯಾಯಾಲಯ ಅಗ್ರಿ ಗೋಲ್ಡ್ ಕಂಪನಿಯ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದರಲ್ಲಿ ಕೆಲ ಆಸ್ತಿಗಳು ಕರ್ನಾಟಕದಲ್ಲಿವೆ.
ಅಲ್ಲದೆ, ಆಂಧ್ರಪ್ರದೇಶ ಸರ್ಕಾರ ಸಂಸ್ಥೆಯಿಂದ ಹಣ ಕಳೆದುಕೊಂಡ ಹೂಡಿಕೆದಾರರಿಗೆ ತಲಾ 20 ಸಾವಿರ ರೂ. ಪರಿಹಾರ ನೀಡಿದೆ. ಸಂಸ್ಥೆಯ ವ್ಯವಹಾರ ಐದು ರಾಜ್ಯಗಳಲ್ಲಿದ್ದು, ಎಲ್ಲೆಡೆಯೂ ವಂಚನೆ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಕಂಪನಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾಂತ್ರಿಕ ಅಡಚಣೆಗಳಿವೆ. ಆದ್ದರಿಂದ ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದೇ ನೋಡೆಲ್ ರಾಜ್ಯವನ್ನಾಗಿ ಪರಿಗಣಿಸಿ ಒಂದೇ ನ್ಯಾಯಾಲಯ ಸ್ಥಾಪಿಸಲು ಅಗತ್ಯ ನಿರ್ದೇಶನ ನೀಡಲು ಕೋರಿ ಸುಪ್ರೀಂಕೊರ್ಟ್ ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವಿವರಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ತೆಲಂಗಾಣ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿರುವ ಕರ್ನಾಟಕದಲ್ಲಿನ ಆಸ್ತಿಗಳನ್ನು ಪರಿಶೀಲಿಸಬೇಕು. ಯಾವ ಆಸ್ತಿ ಮುಟ್ಟುಗೋಲು ಹಾಕಿಕೊಂಡಿಲ್ಲವೋ, ಅವನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿತು. ಹಾಗೆಯೇ, ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಕೈಗೊಂಡಿರುವ ಕ್ರಮಗಳ ಕುರಿತು ಜುಲೈ 5ರೊಳಗೆ ಮಾಹಿತಿ ಸಲ್ಲಿಸಬೇಕು. ನೆರೆ ರಾಜ್ಯಗಳಲ್ಲಿ ಸಂಸ್ಥೆ ವಿರುದ್ಧ ಹೊರಡಿಸಿರುವ ಆದೇಶಗಳನ್ನು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತು.
ಓದಿ.. ಅಗ್ರಿ ಗೋಲ್ಡ್ ವಂಚನೆ ಪ್ರಕರಣ: ಸಕ್ಷಮ ಪ್ರಾಧಿಕಾರಿ ನೇಮಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ