ಬೆಂಗಳೂರು: ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಏಷ್ಯಾದ ಅತಿ ದೊಡ್ಡ ಏರ್ ಶೋ 'ಏರೋ ಇಂಡಿಯಾ' ವೈಮಾನಿಕ ಪ್ರದರ್ಶನ 2023 ರ ಫೆಬ್ರವರಿಯಲ್ಲಿ ನಡೆಯಲಿದೆ. ಏರ್ ಶೋಗೆ ಯಲಹಂಕ ವಾಯುನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕೊಲಿನ್ಸ್ ಏರೋಸ್ಪೇಸ್ ಗ್ಲೋಬಲ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ ಉದ್ಘಾಟಿಸಿ ಮಾತನಾಡಿದ ಸಿಎಂ, ಈ ಬಾರಿಯೂ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಗೊಂಡಿದ್ದು, ನಾಲ್ಕು ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ. ರಾಜ್ಯದಲ್ಲಿರುವ ಏರೋಸ್ಪೇಸ್ ಸಂಶೋಧನಾ ಕೇಂದ್ರ, ವಿಮಾನಯಾನ, ವಿಮಾನ ಉತ್ಪಾದನಾ ರಂಗಗಳಲ್ಲಿನ ಅವಕಾಶಗಳು ಹಾಗೂ ಸಾಧ್ಯತೆಗಳ ಬಗ್ಗೆ ಏರ್ ಶೋ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ: ಭಾರತದ ಎಂಜಿನಿಯರ್ಗಳ ಸಾಮರ್ಥ್ಯ ಉತ್ತಮವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗಗಳನ್ನೂ ಒಳಗೊಂಡ ಸಂಪೂರ್ಣ ವಿಮಾನ ಉತ್ಪಾದನೆ ಬೆಂಗಳೂರಿನಲ್ಲಿಯೇ ಆಗಬೇಕೆಂಬುದು ನನ್ನ ಕನಸು. ಏರೊಸ್ಪೇಸ್ ಕ್ಷೇತ್ರಕ್ಕೆ ಬೆಂಗಳೂರು ಉತ್ತಮ ಸ್ಥಳವಾಗಿದ್ದು, ಇಲ್ಲಿ ಡಿಆರ್‌ಡಿಒ, ಎನ್‌ಎಎಲ್, ಹೆಚ್ಎಎಲ್‌ನಂತಹ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಸೆಮಿ ಕಂಡಕ್ಟರ್‌ಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರಗಳಿವೆ ಎಂದು ಹೇಳಿದರು.
ಕೊಲಿನ್ಸ್ ಏರೊಸ್ಪೆಸ್ ಎಂಜಿನಿಯರಿಂಗ್ ಸಂಸ್ಥೆಯನ್ನು ಆರಂಭಿಸಿದ್ದು ಸಂತಸವಾಗಿದೆ. ಈ ಸಂಸ್ಥೆ ಬೆಂಗಳೂರಿನಲ್ಲಿ 25 ವರ್ಷ ಪೂರೈಸಿದೆ. ಇದು ಸಂಸ್ಥೆಯ ಸಾಧನೆಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲಿನ್ಸ್ ಸಂಸ್ಥೆಯ ಅಧ್ಯಕ್ಷ ಸ್ಟೀಫನ್ ಟಿಮ್ಸ್ , ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಭಾರತೀಯ ಯುದ್ಧ ವಿಮಾನಗಳ ಅತಿದೊಡ್ಡ ಫ್ಲೈಪಾಸ್ಟ್.. 75 ರ ಆಕೃತಿಯಲ್ಲಿ ಹಾರಾಡಿದ ಜಾಗ್ವಾರ್ಸ್