ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋಗೆ ಹೆಚ್ಚುವರಿ ವಿಶೇಷ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ. ಫೆಬ್ರವರಿ 13 ರಿಂದ 17 ರ ವರೆಗೆ ಏರ್ ಶೋ ನಡೆಯಲಿದ್ದು, ಏರ್ ಶೋ ವೀಕ್ಷಿಸಲು ಹೆಚ್ಚಿನ ಜನದಟ್ಟಣೆ ಆಗಮಿಸುವುದರಿಂದ 10 ಹೆಚ್ಚುವರಿ ಬಸ್ಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.ದಿನಾಂಕ 16 ಹಾಗೂ 17ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಬಸ್ಗಳ ಸಂಚಾರದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದೆ.
ಬಿಎಂಟಿಸಿಯೂ ಬಸ್ಗಳು ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಶಿವಾಜಿನಗರ, ಹೆಬ್ಬಾಳ, ಬನಶಂಕರಿ ಟಿಟಿಎಂಸಿ, ಯಲಹಂಕ ಎನ್ ಇ ಎಸ್, ಕೆಂಗೇರಿ, ಟಿನ್ ಫ್ಯಾಕ್ಸಿ ಹಾಗೂ ಯಶವಂತಪುರದಿಂದ ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.
ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ:ಏರ್ ಶೋಗೆ ಹೋಗುವವರು ಬಸ್ ನಿಲ್ದಾಣದವರೆಗೆ ತಮ್ಮ ಸ್ವಂತ ವಾಹನದಲ್ಲಿ ಬರಬೇಕು. ಅಲ್ಲಿಂದ ಬಸ್‌ನಲ್ಲಿ ತೆರಳಬೇಕು. ಆದ್ದರಿಂದ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಯಶವಂತಪುರ, ಶಾಂತಿನಗರ, ಜಯನಗರ, ಕೋರಮಂಗಲ, ಕೆಂಗೇರಿ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬಸ್ ನಿಲ್ದಾಣದಲ್ಲಿ ಸ್ವಂತ ವಾಹನ ಪಾರ್ಕಿಂಗ್ ಮಾಡಿ ಬಸ್ ಬಳಸುವಂತೆ ಸಾರ್ವಜನಿಕರಲ್ಲಿ ಬಿಎಂಟಿಸಿ ಮನವಿ ಮಾಡಿದೆ.
ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ: ದೇಶ-ವಿದೇಶಗಳಿಂದ ಗಣ್ಯರು ರಾಜಧಾನಿಗೆ ದೌಡಾಯಿಸಿದ್ದಾರೆ. ಪ್ರತಿಷ್ಠಿತ ತಾರಾ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿಯೂ ಪೊಲೀಸರು ಭದ್ರತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಯಲಹಂಕ ವಾಯುನೆಲೆಯ ಏರ್ ಶೋ ಸೂಕ್ತ ಭದ್ರತೆಗೆ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಕಲ್ಪಿಸಿದೆ. 4 ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. 18 ಡಿಸಿಪಿಗಳು, ಬಹುತೇಕ ಎಲ್ಲಾ ವಲಯದ ಎಸಿಪಿಗಳು, ಪೊಲೀಸ್ ಇನ್ಸ್ಪೆಕ್ಟರ್, ಪಿಎಸ್ಐ ಸೇರಿದಂತೆ ಒಟ್ಟು 5,000 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿಯಾಗಿ 52 ಕೆಎಸ್ಆರ್ಪಿ, 26 ಸಿಎಆರ್ ತುಕಡಿಗಳು ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.
ಯಲಹಂಕ ವಾಯುನೆಲೆಯ ಪ್ರವೇಶ ದ್ವಾರದ ಮುಂದೆ 1500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಏರ್ ಶೋನಲ್ಲಿ ಭಾಗಿಯಾಗುವ ಅತಿ ಗಣ್ಯ ಹಾಗೂ ಗಣ್ಯರು ಈಗಾಗಲೇ ನಗರಕ್ಕೆ ಬಂದಿದ್ದು, ವಾಸ್ತವ್ಯ ಹೂಡಿರುವ ಸ್ಟಾರ್ ಹೋಟೆಲ್ಗಳ ಮುಂದೆ ಪೊಲೀಸ್ ಚೌಕಿ ತೆರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಬಿಬಿಎಂಪಿ ಮಾಂಸ ಮಾರಾಟ:ವಿಮಾನ ಹಾರಾಟಕ್ಕೆ ಅಡಚಣೆಯಾಗುವ ಡ್ರೋನ್ಗಳು, ಪ್ಯಾರಾಚೂಟ್, ಮೈಕ್ರೋ ಲೈಟ್ಸ್, ಸಣ್ಣ ಪ್ರಮಾಣದ ಏರ್ಕ್ರಾಪ್ಟ್, ಬಲೂನ್, ಏರಿಯಲ್ ವೆಹಿಕಲ್ಸ್, ರೊಬೋಟಿಕ್ ಆಟೋ ಮಷಿನ್ಗಳಿಗೆ ನಿಷೇಧ ಹೇರಲಾಗಿದೆ. ಯಾವುದೇ ರೀತಿಯ ಗಾಳಿಪಟ ಮತ್ತು ಪಾರಿವಾಳ ಹಾರಾಡದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ವೈಮಾನಿಕ ಪ್ರದರ್ಶನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ 15 ದಿನಗಳ ಹಿಂದೆಯೇ ಬಿಬಿಎಂಪಿ ಮಾಂಸ ಮಾರಾಟ ನಿಷೇಧಿಸಿದೆ.
ಇದನ್ನೂಓದಿ:ಆಡಳಿತ ಯಂತ್ರಕ್ಕೆ ಸರ್ಜರಿ: 17 ಐಎಎಸ್ ಅಧಿಕಾರಿಗಳ ವರ್ಗಾವಣೆ