ಬೆಂಗಳೂರು: ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಆರೋಪಗಳನ್ನು ಮಾಡಿರುವ ಆರೋಪ ಎದುರಿಸುತ್ತಿದ್ದ ಹೈಕೋರ್ಟ್ ವಕೀಲ ಕೆ. ಎಸ್. ಅನಿಲ್ ಅವರನ್ನು ಫೆ.10ರ(ಶುಕ್ರವಾರ) ವರೆಗೆ ಪೊಲೀಸ್ ಸುರ್ಪದಿಯಲ್ಲಿ ಇಟ್ಟುಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿದೆ.
2019 ರಲ್ಲಿ ದಾಖಲಿಸಲಾದ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಹೈಕಮಾಂಡ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ಪೀಠದಲ್ಲಿ,ಫೆ.2ರಂದು ನಡೆಯಿತು. ವಿಚಾರಣೆ ವೇಳೆ ಕೋರ್ಟ್ ಆದೇಶದಂತೆ ನ್ಯಾಯಾಲಯದ ಮುಂದೆ ಹಾಜರಾದ ಆರೋಪಿ ವಕೀಲ, ಮೊದಲಿಗೆ ತಮಗೆ ನಿಯಮಾನುಸಾರ ನೋಟಿಸ್ ಜಾರಿಯಾಗಿಲ್ಲ ಎಂದರು.
ಬಳಿಕ 2023 ರ ಜ.13 ರಂದು ಆದೇಶದಲ್ಲಿ ದಾಖಲಾಗಿರುವ ಅಂಶಗಳು ಮತ್ತು ನಡೆದ ಘಟನೆಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆಂದು ಆದೇಶದಲ್ಲಿ ದಾಖಲಿಸಲಾಗಿದೆ. ಅಲ್ಲದೆ, ತಾವು ಹೈಕೋರ್ಟ್ ಸಿಜೆ ಮತ್ತು ಸುಪ್ರೀಂಕೋರ್ಟ್‌ನ ಸಿಜೆ ವಿರುದ್ಧ ಆರೋಪಗಳನ್ನು ಮಾಡಿರುವುದರಿಂದ ಆ ನ್ಯಾಯ ಪೀಠಗಳನ್ನು ಹೊರತುಪಡಿಸಿ ಉಳಿದ ನ್ಯಾಯಪೀಠದ ಮುಂದೆ ತಮ್ಮ ಅರ್ಜಿ ವಿಚಾರಣೆ ನಡೆಸುವಂತೆ ಮೆಮೋ ಸಲ್ಲಿಸಿದ್ದಾರೆ. ಆರೋಪ ಹೇಳಿಕೆ ಪಡೆದ ವಿಭಾಗೀಯ ಪೀಠ ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಮಾಡಿರುವ ಆರೋಪಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವವಿಲ್ಲ ಎನಿಸುತ್ತದೆ.
ವಕೀಲಿಕೆ ಮಾಡುತ್ತಿರುವ ಆರೋಪಿ ನಿರಂತರವಾಗಿ ನ್ಯಾಯಾಂಗದ ಘನತೆಯ ಕುಂದಾಗುವಂತೆ ವೃಥಾ ಆರೋಪಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಬಗೆಗಿನ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಆರೋಪಿ ನ್ಯಾಯಾಂಗ ನಿಂದನೆ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶ ಮಾಡದೆ ಅನ್ಯ ಅಯ್ಕೆ ಇಲ್ಲ ಎಂದು ತಿಳಿಸಿ ಫೆ.10ರ ವರೆಗೆ ಪೊಲೀಸ್ ಸುರ್ಪದಿಯಲ್ಲಿ ಇಟ್ಟುಕೊಳ್ಳುವಂತೆ ಆದೇಶ ನೀಡಿ ಫೆ.10ರಂದು ಮತ್ತೆ ಕೋರ್ಟ್ ಮುಂದೆ ಹಾಜರು ಪಡಿಸುವಂತೆ ನಿರ್ದೇಶನ ನೀಡಿತು.
ವಕೀಲರಿಗೆ ಬೆದರಿಕೆ: ಆರೋಪಿ ವಿರುದ್ಧ ಜಾಮೀನು ವಜಾಗೊಳಿಸಲು ವಾದ ಮಂಡಿಸಿದ್ದ ವಕೀಲರಿಗೆ ಬೆದರಿಕೆ ಹಾಕಿದ್ದು, ಇದರ ವಿರುದ್ಧ ಹೈ ಕೋರ್ಟ್ ಖಡಕ್ ಎಚ್ಚರಿಕೆ ನೀಡಿರುವ ಘಟನೆ ಮೂರು ದಿನದ ಹಿಂದೆ ನಡೆದಿತ್ತು.
ಪ್ರಕರಣ ಏನು?: ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಮಧುಕರ್ ಅಂಗೂರ್ ಎನ್ನುವರು ಕಾಲೇಜಿನ ವಿದ್ಯಾರ್ಥಿಗಳು ಹಾಗು ಅವರ ಪೋಷಕರಿಗೆ ಇ-ಮೇಲ್ ಕಳುಹಿಸುವ ಮೂಲಕ ಅಕ್ರಮವಾಗಿ ಬೋಧನ ಶುಲ್ಕವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಹೇಳುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅವರನ್ನು ಕುಲಪತಿ ಹುದ್ದೆಯಿಂದ ತೆಗೆದಿದ್ದರು ಕೂಡ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪದಡಿ ಮಧುಕರ್ ಅಂಗೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಹೈಕೋರ್ಟ್ 2022ರಲ್ಲಿ ಅಂಗೂರ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆರೋಪಿಗೆ ಸಿಕ್ಕ ಈ ಜಾಮೀನನ್ನು ರದ್ದುಗೊಳಿಸುವಂತೆ ಬೆಂಗಳೂರಿನ ಅಲಯನ್ಸ್ ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಿತ್ತು. ಈ ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎಂ ಎಸ್ ಶ್ಯಾಮ್ಸುಂದರ್ ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದರು. ಹೀಗಾಗಿ ಇವರಿಗೆ ಆರೋಪಿ ಕಡೆಯವರಿಂದ ಬೆದರಿಕೆಗಳು ಬರುತ್ತಿರುವುದನ್ನು ಕೋರ್ಟ್ನಲ್ಲಿ ಬಹಿರಂಗಪಡಿಸಿದ್ದರು. ಇದರಿಂದ ಕೋಪಗೊಂಡ ಹೈಕೋರ್ಟ್ ಬೆದರಿಕೆ ಬಂದಿರುವ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡು ಆರೋಪಿ ಮಧುಕರ್ ಅಂಗೂರ್ನ್ನು ವಿಚಾರಿಸಿದಾಗ ನನಗು ಇದಕ್ಕೂ ಸಂಬಂಧವಿಲ್ಲ, ಗೊತ್ತಿಲ್ಲದೆ ನನ್ನ ಬೆಂಬಲಿಗರಿಂದ ಈ ರೀತಿಯಾಗಿದ್ದರೆ ಕ್ಷಮೆ ಇರಲಿ ಎಂದು ಇದಕ್ಕಾಗಿ ಬೇಷರತ್ ಕ್ಷಮಾಪಣೆ ಕೋರಿದ್ದರು.
ಇದನ್ನೂ ಓದಿ: ನಕಲಿ ನಂಬರ್ ಪ್ಲೇಟ್ ಬಳಸಿದ್ರೆ ಕ್ರಿಮಿನಲ್ ಕೇಸ್ : ವಿಶೇಷ ಸಂಚಾರ ಆಯುಕ್ತರ ಖಡಕ್ ಎಚ್ಚರಿಕೆ