ಬೆಂಗಳೂರು: ರಾಜ್ಯ ಸರ್ಕಾರದ ಭ್ರಷ್ಟಾಚಾರದ ದಾಖಲೆಗಳಿರುವ ಪೆನ್ ಡ್ರೈವ್ ತಮ್ಮ ಬಳಿಯಿದೆ ಎಂದಿರುವ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಠಾಣೆಗೆ ದೂರು ನೀಡಲಾಗಿದೆ. ಆರೋಪ ಮಾಡುತ್ತಿರುವ ಹೆಚ್ ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಬಿಡುಗಡೆಗೊಳಿಸದೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಹಾಗೂ ಭ್ರಷ್ಟಾಚಾರಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಧಾನಸೌಧ ಠಾಣೆಗೆ ವಕೀಲ ಅಮೃತೇಶ್ ಎನ್ ಪಿ ಅವರು ದೂರು ನೀಡಿದ್ದಾರೆ.
"ರಾಜ್ಯದ ಮಾಜಿ ಮುಖ್ಯಮಂತ್ರಿ, ಚೆನ್ನಪಟ್ಟಣದ ಹಾಲಿ ಶಾಸಕರಾಗಿರವ ಹೆಚ್ಡಿ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಭ್ರಷ್ಟಾಚಾರಗಳ ದಾಖಲೆಯಿರುವ ಪೆನ್ ಡ್ರೈವ್ ತಮ್ಮ ಬಳಿ ಇರುವುದಾಗಿ ಹೇಳಿದ್ದರು. ಹೇಳಿ ತಿಂಗಳುಗಳೇ ಕಳೆದರೂ ಸಹ ವಿಧಾನಸಭಾ ಸ್ಪೀಕರ್'ಗಾಗಲಿ ಅಥವಾ ಸಂಬಂಧಪಟ್ಟ ಇಲಾಖೆಗಾಗಲಿ, ಪೊಲೀಸರಿಗಾಗಲಿ ಪೆನ್ ಡ್ರೈವ್ ನೀಡಿರುವುದಿಲ್ಲ."
"ರಾಜ್ಯದ ಓರ್ವ ಜವಾಬ್ದಾರಿಯುತ ರಾಜಕಾರಣಿಯಾಗಿ ಅವರು ಭ್ರಷ್ಟಾಚಾರಕ್ಕೆ ಸಾಥ್ ನೀಡಿದಂತಾಗುತ್ತದೆ. ಸರ್ಕಾರದ ಭ್ರಷ್ಟಾಚಾರದ ದಾಖಲೆಗಳಿರುವ ಪೆನ್ ಡ್ರೈವ್ನ್ನು ಸ್ಪೀಕರ್ಗಾಗಲಿ ಅಥವಾ ಅವರೇ ಹೇಳಿದಂತೆ ಎಲ್ಲಾ ಶಾಸಕರಿಗೆ ಹಂಚಲಿ, ಅಥವಾ ಸಾರ್ವಜನಿಕರ ಮುಂದೆ ಬಹಿರಂಗಪಡಿಸಲಿ ಎಂದು ಉತ್ತರ ಕೋರಿ ನೋಟಿಸ್ ನೀಡಿದ್ದೆವು. ಅದಕ್ಕಾಗಿ 7 ದಿನಗಳ ಕಾಲಾವಕಾಶವನ್ನೂ ನೀಡಲಾಗಿತ್ತು. ಆದರೆ ಇಂದಿಗೂ ಸ್ಪೀಕರ್ಗೆ ಆಗಲಿ, ಪೊಲೀಸರಿಗೆ ಆಗಲಿ ಪೆನ್ ಡ್ರೈವ್ ನೀಡದ ಕಾರಣ ದೂರು ನೀಡಿದ್ದೇವೆ" ಎಂದು ವಕೀಲ ಅಮೃತೇಶ್ ತಿಳಿಸಿದ್ದಾರೆ.
"ರಾಜ್ಯದಲ್ಲಿ ಹುಲಿ ಉಗುರಿನ ವಿಚಾರ ಸುದ್ದಿಯಾದಾಗ, ತಮ್ಮ ಬಳಿಯಿದ್ದ ಹುಲಿ ಉಗುರಿನ ಪೆಂಡೆಂಟ್ಅನ್ನು ಅವರೇ ಕರೆದು ತನಿಖಾಧಿಕಾರಿಗಳ ಸುಪರ್ದಿಗೆ ನೀಡಿರುವುದಾಗಿ ಮೊನ್ನೆ ಮೊನ್ನೆಯಷ್ಟೇ ಕುಮಾರಸ್ವಾಮಿಯವರು ಹೇಳಿದ್ದಾರೆ. ಹಾಗಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಅದೇ ರೀತಿ ಅವರೇ ಕರೆದು ಪೆನ್ ಡ್ರೈವ್ ಸಹ ನೀಡಲಿ. ಯಾಕೆಂದರೆ ರಾಜ್ಯ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇದೂ ಸಹ ಸುಳ್ಳು ಬ್ಲ್ಯಾಕ್ ಮೇಲ್ ತಂತ್ರದಂತಿದ್ದು, ಪೊಲೀಸರು ಅವರಿಂದ ಪೆನ್ ಡ್ರೈವ್ ವಶಪಡಿಸಿಕೊಳ್ಳಲಿ" ಎಂದು ಇದೇ ಸಂದರ್ಭದಲ್ಲಿ ಅಮೃತೇಶ್ ಒತ್ತಾಯಿಸಿದರು.
ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದಿಂದ ದುಬೈಗೆ ತೆರಳಿದ ಹೆಚ್ಡಿಕೆ