ಬೆಂಗಳೂರು: ಈ ಸಾಲಿನ ಶೈಕ್ಷಣಿಕ ವರ್ಷದ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಜುಲೈ 10 ರಿಂದ ಪ್ರವೇಶ (ಅಡ್ಮಿಷನ್) ಆರಂಭವಾಗುತ್ತದೆ. ಕೆಲವು ಪ್ರಕ್ರಿಯೆಗಳನ್ನು ಸಂಪೂರ್ಣ ಮಾಡಬೇಕಿತ್ತು. ಹೀಗಾಗಿ ಅವುಗಳನ್ನು ಪೂರ್ತಿ ಮಾಡಿ ಪ್ರವೇಶ ಆರಂಭ ಮಾಡುತ್ತಿದ್ದೇವೆ. ಆನ್ಲೈನ್ನಲ್ಲಿ ಎಲ್ಲ ಮಾಹಿತಿಯನ್ನು ಹಾಕಲಾಗುವುದು ಎಂದು ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ಒಂದೇ ಅರ್ಜಿ ಮೂಲಕ ಯಾವುದಾದರೂ ಕಾಲೇಜು ಆಯ್ಕೆ ಮಾಡಿಕೊಳ್ಳಬಹುದು. ಪಿಯುಸಿ ರಿಜಿಸ್ಟರ್ ನಂಬರ್ ಹಾಕಿದರೆ ಸಾಕು, ಎಲ್ಲ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಇರುವ ಲಾಗಿನ್ ಸಿಸ್ಟಮ್ ಇದರಲ್ಲೇ ಇರಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರವಾಗಿ ಎರಡನೇ ವರ್ಷಕ್ಕೆ ಬೇಕಾದ ಎಲ್ಲ ಪ್ರಕ್ರಿಯೆ ಮಾಡಲಾಗುತ್ತಿದೆ.
ಗುಣಮಟ್ಟದ ಕಲಿಕೆಗೆ ಸಿದ್ಧತೆ: ಎನ್ಇಪಿಗೆ ಬೇಕಾದ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೊದಲನೇ ವರ್ಷ ನಡೆದಿದ್ದು, ಎರಡನೇ ವರ್ಷಕ್ಕೂ ಮುಂದುವರೆಸಲಾಗುತ್ತಿದೆ. ಓಪನ್ ಎಲೆಕ್ಟ್ರಿಕ್ ಸಿಸ್ಟಮ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಗೆ ಸಿದ್ಧತೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇ-ಆಫೀಸ್ ಮೂಲಕ ಫೈಲ್ಗಳ ರವಾನೆ: ಸರ್ಕಾರದ ಯಾವುದೇ ವಿಚಾರ ಕಳಿಸುವಾಗ ಇ ಆಫೀಸ್ ಮೂಲಕ ಕಳಿಸಲಾಗುವುದು. 32 ಸಾವಿರ ಫೈಲ್‌ಗಳು ಇ-ಆಫೀಸ್ ಮೂಲಕ ರವಾನಿಸಲಾಗಿದೆ. ಯಾವುದೇ ಫೈಲ್ ಮ್ಯಾನ್ಯುಯಲ್ ಆಗಿ ಹೋಗುವುದಿಲ್ಲ. ಎರಡು ವರ್ಷದಿಂದ 1,600 ಕೋಟಿ ರೂ. ಸ್ಕಾಲರ್ ಶಿಪ್ ನಿಧಿ ವಿದ್ಯಾರ್ಥಿಗಳ ಅಕೌಂಟಿಗೆ ನೇರವಾಗಿ ಹೋಗಲಿದೆ. ಎಲ್ಲ ವಿವಿಗಳಲ್ಲಿ ವೇತನವೂ ಹೆಚ್ಆರ್ಎಂಎಸ್ ಮೂಲಕವೇ ಹೋಗಲಿದೆ ಎಂದು ಸಚಿವರು ತಿಳಿಸಿದರು.
ಸಿಎಂ ಸೂಚನೆ: ಎಲ್ಲ ವಿವಿಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಪರೀಕ್ಷೆ ಕೂಡ ಮಾಡಲಾಗುವುದು. ಯುಜಿಸಿ ನಿಯಮದ ಪ್ರಕಾರ ಸಂದರ್ಶನ ಮಾಡಲಾಗುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಿರುವ ಶುಲ್ಕ ಇರಲಿದೆ, ಹೆಚ್ಚಳ ಮಾಡಿಲ್ಲ. ಕಾಲೇಜಿನಲ್ಲಿ ಸಂಗ್ರಹ ಆಗಿರುವ ಶುಲ್ಕ ಅದೇ ಕಾಲೇಜಿನ ಅಕೌಂಟಿನಲ್ಲೇ ಉಳಿಸಿಕೊಳ್ಳಲು ಸೂಚಿಸಿದೆ. ಇದೇ ಮೊದಲ ಬಾರಿಗೆ ಸರ್ಕಾರ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ಐ ಹಗರಣ: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದ ಅಶ್ವತ್ಥ ನಾರಾಯಣ
ಹೊಸ ಶಿಕ್ಷಣ ಕಾಯಿದೆ ತರಲು ನಿರ್ಧಾರ: ಉನ್ನತ ಶಿಕ್ಷಣದಲ್ಲಿ ಮತ್ತಷ್ಟು ಸುಧಾರಣೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಕಾರ ರಾಜ್ಯದಲ್ಲಿ ಹೊಸ ಶಿಕ್ಷಣ ಕಾಯಿದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಹೊಸ ಕಾಯಿದೆಯನ್ನು ತರಲು ವಾಸುದೇವ ಹತ್ರಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯನ್ನು ಮಾಡಿದ್ದೇವೆ. ಉನ್ನತ ಶಿಕ್ಷಣ ವೆಬ್ಸೈಟ್ನಲ್ಲಿ ಹಾಕಲಾಗಿದೆ. ತಮ್ಮ ಸಲಹೆಗಳನ್ನು ಹಾಕಬಹುದು ಎಂದು ತಿಳಿಸಿದರು.