ಬೆಂಗಳೂರು: ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ ರೀತಿಯಲ್ಲೂ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿಂದ ಕರೆ ಬಂದಿದೆ ಎನ್ನುವ ಬಗ್ಗೆ ತನಿಖೆಯಾಗುತ್ತಿದೆ. ಪೋಷಕರಿಗೆ ಆತಂಕ ಬೇಡ. ಕೆಟ್ಟ ಹೆಸರು ತರಬೇಕು ಎಂದು ಹೇಳಿ ಈ ರೀತಿ ಮಾಡುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ತಗೆದುಕೊಂಡು ತಪಾಸಣೆ ಮಾಡುತ್ತಿದ್ದಾರೆ ಎಂದರು.
ಕರ್ನಾಟಕದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ. ಪೊಲೀಸರಿಗೆ ಯಾವುದೇ ಛಾನ್ಸ್ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದ್ದೇನೆ. ಬೆದರಿಕೆ ಕರೆ ಮಾಡಿದವರನ್ನು ಬಂಧನ ಮಾಡುತ್ತೇವೆ. ಕಾಲ್ ಡಿಟೈಲ್ಸ್ ಚೆಕ್ ಮಾಡಲು ಹೇಳಿದ್ದೇವೆ. ಎಲ್ಲಾ ರೀತಿ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ತಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.
ಸಿಎಂಗೆ ಗುಪ್ತಚರ ಇಲಾಖೆ ವಿವರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಘಟನೆ ಕುರಿತು ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ ಸಮಗ್ರ ವಿವರ ನೀಡಿದ್ದಾರೆ. ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆ ಬಂದಿದ್ದು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ 6 ಶಾಲೆಗಳಿಗೆ ಬಾಂಬ್ ಬೆದರಿಕೆ.. ಕಮಿಷನರ್ ಪಂತ್ ಹೀಗೆ ಹೇಳಿದರು.