ಬೆಂಗಳೂರು : ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ ಬಾರಿಗಿಂತ ಹೆಚ್ಚುವರಿಯಾಗಿ ಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸ್ಪಷ್ಟಪಡಿಸಿದ್ದಾರೆ.
2020-21 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜುಲೈ ಅಂತ್ಯದವರೆಗೆ ಒಟ್ಟು 13.99 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಇದರಲ್ಲಿ ಯೂರಿಯಾ 4.98 ಲಕ್ಷ, ಡಿಎಪಿ 3.06 ಲಕ್ಷ ಮೆಟ್ರಿಕ್ ಟನ್, ಎಂಒಪಿ 1.37 ಲಕ್ಷ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ 4.58 ಲಕ್ಷ ಮೆಟ್ರಿಕ್ ಟನ್ ಗೆ ಬೇಡಿಕೆಯಿದೆ.
ಈ ಪೈಕಿ ಜುಲೈ 23 ರವರೆಗೆ ಒಟ್ಟು 13.50 ಲಕ್ಷ ಮೆಟ್ರಿಕ್ ಟನ್ ಅಂದರೆ 5.36 ಮೆಟ್ರಿಕ್ ಟನ್ ಯೂರಿಯಾ, 2.49 ಲಕ್ಷ ಮೆಟ್ರಿಕ್ ಟನ್ ಡಿ ಎ ಪಿ, ಎಂಒಪಿ- 1.03 ಲಕ್ಷ ಮೆಟ್ರಿಕ್ ಟನ್ ಮತ್ತು ಕಾಂಪ್ಲೆಕ್ಸ್ - 4.62 ಲಕ್ಷ ಮೆಟ್ರಿಕ್ ಟನ್ ಸರಬರಾಜಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.5.4 ರಷ್ಟು ಹೆಚ್ಚು ಅಂದರೆ 13.50 ಲಕ್ಷ ಮೆಟನ್ ವಿವಿಧ ರಸಗೊಬ್ಬರಗಳು ಸರಬರಾಜಾಗಿರುತ್ತವೆ. ವಿಶೇಷವಾಗಿ ಶೇ 30.8 ರಷ್ಟು ಯೂರಿಯಾ ರಸಗೊಬ್ಬರ ಹೆಚ್ಚುವರಿಯಾಗಿ ಸರಬರಾಜಾಗಿದೆ. ಅದರಂತೆ ಮುಂಗಾರು ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ಸಹ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದ್ದು, ಯಾವುದೇ ಕೊರತೆಯಿರುವುದಿಲ್ಲ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 5.97 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ರಾಜ್ಯಾದ್ಯಂತ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೆ 3,29,862.8 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಹಾಲಿ ರೈತ ಸಂಪರ್ಕ ಕೇಂದ್ರಗಳಲ್ಲಿ 52,110 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇದೆ. ರಾಜ್ಯದಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ಬಿತ್ತನೆ ಬೀಜ ಹಾಗೂ ಯೂರಿಯಾ ರಸಗೊಬ್ಬರಕ್ಕೆ ಯಾವುದೇ ಕೊರತೆಯಾಗಿಲ್ಲ. ರೈತರ ಬೇಡಿಕೆಗಳನ್ನು ಪೂರೈಸಲು ಇಲಾಖೆ ಬದ್ಧವಾಗಿದೆ ಎಂದಿದ್ದಾರೆ.