ಬೆಂಗಳೂರು: ನಾಳೆ ಭಾರತ- ಶ್ರೀಲಂಕಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದ ಸಂಬಂಧ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಕಳೆದೊಂದು ವಾರದಿಂದ ಮೈದಾನದ ಭದ್ರತೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ವೀಕ್ಷಣಾ ಗೋಪುರಗಳ ನಿರ್ಮಾಣ, ಮೈದಾನ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕೂಡಾ ಶ್ವಾನ ದಳದಿಂದ ತಪಾಸಣೆ ನಡೆಸಿದ್ದೇವೆ. ಪಂದ್ಯದ ಐದೂ ದಿನ 700 ಜನ ಸಿಬ್ಬಂದಿ ಭದ್ರತೆಯ ಹೊಣೆ ವಹಿಸಲಿದ್ದಾರೆ ಎಂದರು.
ಇಬ್ಬರು ಡಿಸಿಪಿ, ಹತ್ತು ಜನ ಎಸಿಪಿ, 34 ಇನ್ಸ್ಪೆಕ್ಟರ್ಗಳು ಉಳಿದಂತೆ ಪಿಎಸ್ಐ, ಕಾನ್ಸ್ಟೇಬಲ್ಸ್ ಇರಲಿದ್ದಾರೆ. ಕೆಎಸ್ಆರ್ಪಿ ಸಿಬ್ಬಂದಿಯನ್ನು ಮೈದಾನದ ಸುತ್ತಲೂ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ವಹಿಸಲಾಗುವುದು ಎಂದು ತಿಳಿಸಿದರು.
ಟಿ20 ಪಂದ್ಯದಂತೆ ಮ್ಯೂಸಿಕ್ ಬಳಸಲು ಅನುಮತಿ: ಪಂದ್ಯಕ್ಕೆ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಭಾನುವಾರ ಹಬ್ಬದ ವಾತಾವರಣವಿರಲಿದೆ. ಟಿ-20 ಪಂದ್ಯದಂತೆ ಮ್ಯೂಸಿಕ್ ಬಳಸಲು ಬಿಸಿಸಿಐ ಅನುಮತಿ ಸಿಕ್ಕಿದೆ ಎಂದು ಕೆಎಸ್ಸಿಎ ವಕ್ತಾರ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದರು.
ಪಂದ್ಯದ ಕುರಿತು ಕೆಎಸ್ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ) ವಕ್ತಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನೇಷನ್ ಪರಿಶೀಲಿಸಲಿದ್ದೇವೆ. ಯಾವುದೇ ರೀತಿ ತೊಂದರೆಯಾಗದಂತೆ ಪಂದ್ಯ ಆಯೋಜಿಸಲು ಸಂಪೂರ್ಣ ಸಿದ್ಧತೆ ಕೈಗೊಂಡಿದ್ದೇವೆ ಎಂದು ಹೇಳಿದರು.
2 ವರ್ಷಗಳಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆ: 2 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಚಟುವಟಿಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿರಲಿಲ್ಲ. ಸದ್ಯ ಸರ್ಕಾರದ ನಿರ್ಬಂಧ ಇಲ್ಲದಿರುವುದರಿಂದ ಶೇ. 100ರಷ್ಟು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಖಾಸಗಿ ಸಿಬ್ಬಂದಿಯಿಂದಲೂ ಭದ್ರತೆ: ಪೂರ್ತಿ ಸಾಮರ್ಥ್ಯಕ್ಕೆ ಎಷ್ಟು ಪೊಲೀಸ್ ವ್ಯವಸ್ಥೆಯಾಗಬೇಕು ಎಂದು ಇಲಾಖೆಯ ಜೊತೆ ಚರ್ಚಿಸಲಾಗಿತ್ತು. ಪೊಲೀಸರು ಸಕಲ ರೀತಿಯ ಭದ್ರತೆ ಒದಗಿಸುತ್ತಿದ್ದಾರೆ. ಖಾಸಗಿ ಭದ್ರತಾ ಸಿಬ್ಬಂದಿಯನ್ನು ಸಹ ನಿಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮತ ಯಂತ್ರಗಳು ಹ್ಯಾಕ್ ಆಗುವ ಅನುಮಾನವಿದೆ: ಜಿ.ಪರಮೇಶ್ವರ್