ಬೆಂಗಳೂರು: ಕೆಲಸ ಅರಸಿ ನೇಪಾಳದಿಂದ ನಗರಕ್ಕೆ ಬಂದು ಮನೆಯಲ್ಲಿ ಯಾರೂ ಇಲ್ಲದಿರುವಾಗ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಜೀವನ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ.
ಪ್ರತಾಪ್ ಸಿಂಗ್ ಅಲಿಯಾಸ್ ಪ್ರೇಮ ಬಹದ್ದೂರ್, ಸಂಗೀತಾ ಅಲಿಯಾಸ್ ಸೋನು ದಂಪತಿ ಹಾಗೂ ಸಹಚರ ಬಿಷ್ಣು ಬಹದ್ದೂರ್ ಬಂಧಿತರು. ನೇಪಾಳ ಮೂಲದ ದಂಪತಿಗಳು ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನೇಪಾಳ ಮೂಲದ ವ್ಯಕ್ತಿಯನ್ನೇ ಸಂಪರ್ಕ ಮಾಡಿಕೊಂಡು ಜೆ.ಬಿ ನಗರ ಠಾಣಾ ವ್ಯಾಪ್ತಿಯ ನಿವಾಸಿ ವಿನೋದ್ ಎಂಬುವರ ಮನೆಯ ಸೆಕ್ಯೂರಿಟಿ ಗಾರ್ಡ್ಗಳಾಗಿ ದಂಪತಿಗಳು ಕೆಲಸಕ್ಕೆ ಸೇರಿಕೊಂಡಿದ್ದರು.
ಹೀಗೆ ಕೆಲಸ ಮಾಡಿಕೊಂಡಿದ್ದವರು ಚಿನ್ನಾಭರಣ ಹಾಗೂ ಹಣದ ಬಗ್ಗೆ ಮಾಹಿತಿ ಕಲೆ ಹಾಕಿ, ದರೋಡೆಗೆ ಪಕ್ಕಾ ಪ್ಲಾನ್ ಹಾಕಿಕೊಂಡಿದ್ದರು. ಇದರಂತೆ ಜೂನ್ 29 ರಂದು ಮನೆ ಮಾಲೀಕ ವಿನೋದ್ ಕೆಲಸಕ್ಕೆಂದು ಹೋಗಿದ್ದರೆ, ಆತನ ಪತ್ನಿ ತನ್ನ ಮಗುವಿಗೆ ಹುಷಾರಿಲ್ಲ ಅಂತಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ, ವಿನೋದರ ವಯಸ್ಸಾದ ತಾಯಿಯೊಬ್ಬರೇ ಮನೆಯಲ್ಲಿದ್ದರು. ಇದೇ ಸರಿಯಾದ ಟೈಮ್ ಎಂದು ಪ್ಲಾನ್ ಮಾಡಿಕೊಂಡಿದ್ದ ದಂಪತಿಗಳು ವಿನೋದ್ನ ತಾಯಿಗೆ ಹಗ್ಗದಿಂದ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆಯಿಟ್ಟು ಮನೆಯಲಿದ್ದ 10 ಲಕ್ಷ ನಗದು, 150 ಗ್ರಾಂ ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದರು.
ಮುಂದುವರಿದ ತನಿಖೆ: ಮನೆಗೆ ಬಂದು ಕ್ರೈಂ ಸೀನ್ ನೋಡಿದ್ದ ವಿನೋದ್ ಜೆ. ಬಿ ನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಸಿಬ್ಬಂದಿ ಆನೇಕಲ್ ಬಳಿ ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾವುದೇ ದಾಖಲೆಗಳಿಲ್ಲದೇ ಭಾರತಕ್ಕೆ ಬಂದಿರುವುದು ಗೊತ್ತಾಗಿದೆ. ಇವರ ಹಿಂದೆ ಬೇರೆ ಗ್ಯಾಂಗ್ ಕೂಡ ಇರುವ ಶಂಕೆ ಮೂಡಿದ್ದು, ತನಿಖೆ ಮುಂದುವರೆದಿದೆ.
ಓದಿ: ಮೈತ್ರಿ ಮುಟ್ಟಿನ ಕಪ್ ಯೋಜನೆಗೆ ಚಾಲನೆ: ನಟಿ ಅಮೃತಾ, ಕ್ರಿಕೆಟರ್ ವೇದಾ ಅಂಬಾಸಿಡರ್ಸ್