ಬೆಂಗಳೂರು: ನಟಿ ಸಂಜನಾ ಗಲ್ರಾನಿಯನ್ನ ಸದ್ಯ ಸಿಸಿಬಿ ಪೊಲೀಸರು ಬಂಧಿಸಿದ್ದು, ವಸಂತ ನಗರ ಬಳಿ ಇರುವ ರಿಮ್ಯಾಂಡ್ ಕೋರ್ಟ್ನ 8ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಬಳಿಕ ಹೆಚ್ಚಿನ ವಿಚಾರಣೆಯ ಅಗತ್ಯತೆ ಇರುವ ಹಿನ್ನೆಲೆ 8 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಐದು ದಿನಗಳ ಕಾಲ ಸಂಜನಾರನ್ನ ಕಸ್ಟಡಿಗೆ ನೀಡಿದೆ.
ನಟಿ ಸಂಜನಾ ಗಲ್ರಾನಿ ಸದ್ಯ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಇಂದು ರಾತ್ರಿ ಕಳೆಯಲಿದ್ದು, ನಾಳೆಯಿಂದ ಮತ್ತೆ ಸಿಸಿಬಿ ಪೊಲೀಸರು ವಿಚಾರಣೆ ಚುರುಕುಗೊಳಿಸಲಿದ್ದಾರೆ. ಸದ್ಯ ನಟಿಯರಾದ ಸಂಜನಾ ಹಾಗೂ ರಾಗಿಣಿ ಇಬ್ಬರು ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಕಾರಣ ಮಹಿಳಾ ಸಾಂತ್ವನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ನಾಳೆ ಸಿಸಿಬಿ ತನಿಖಾಧಿಕಾರಿಗಳಾದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು ನಟಿಯರ ವಿಚಾರಣೆ ನಡೆಸಲಿದ್ದಾರೆ.