ಮಹಾ ಮಳೆಯ ರೌದ್ರಾವತಾರಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಆ ಭಾಗ ಇಡೀ ಜಲ ಪ್ರಳಯದಿಂದ ತತ್ತರಿಸಿದೆ. ಅಲ್ಲದೆ ವರುಣನ ಮುನಿಸಿಗೆ ಜನರು ಮನೆ-ಮಠ ಕಳೆದುಕೊಂಡು ಅಕ್ಷರಶ ನಿರ್ಗತಿಕರಾಗಿ ಗಂಜಿ ಕೇಂದ್ರಗಳಲ್ಲಿ ವಾಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ಉತ್ತರ ಕರ್ನಾಟಕದ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಸುದೀಪ್, ದರ್ಶನ್, ಗಣೇಶ್, ತಾರಾ ಅನುರಾಧಾ ಹಾಗೂ ನಿರ್ದೇಶಕ ಪವನ್ ಒಡೆಯರ್ ಹೀಗೆ ಚಿತ್ರರಂಗದ ಸಾಕಷ್ಟು ಸ್ಟಾರ್ಸ್ ಸಂತ್ರಸ್ತರಿಗೆ ಸಹಾಯ ಮಾಡಿ ಎಂದು ಅವರ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇದೀಗ ನಟಿ ಪ್ರಣೀತಾ ಕೂಡಾ ಪ್ರವಾಹಕ್ಕೆ ಸಿಲುಕಿದವರಿಗೆ ಸಹಾಯಹಸ್ತ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಮಗೆಲ್ಲಾ ಗೊತ್ತಿರುವ ಹಾಗೆ ಉತ್ತರ ಕರ್ನಾಟದಲ್ಲಿನ ಭಾರಿ ಮಳೆಗೆ ಜನರು ಮನೆ ಮಠ ಕಳೆದು ಕೊಂಡಿದ್ದು, ಜನಜೀವನ ಅಸ್ತ ವ್ಯಸ್ತಗೊಂಡಿದೆ. ನಾವು ಕನ್ನಡಿಗರಾಗಿ ಉತ್ತರಕರ್ನಾಟಕದ ಜನರಿಗೆ ಎಷ್ಟು ಸಪೋರ್ಟ್ ಮಾಡೋಕಾಗುತ್ತೋ ಅಷ್ಟು ಸಪೋರ್ಟ್ ಮಾಡೋಣ. ನಾನು ಕೂಡ ಉತ್ತರ ಕರ್ನಾಟಕದ ಜನರ ನೆರವಿಗೆ ನಿಲುತ್ತೇನೆ. ನೀವೂ ಸಹ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ನಟಿ ಪ್ರಣೀತಾ ಅಭಿಮಾನಿಗಳಿಗೆ ಮನವಿ ಮಾಡುವ ಮೂಲಕ ಉತ್ತರ ಕರ್ನಾಟಕದ ನೆರವಿಗೆ ಬಂದಿದ್ದಾರೆ.