ಬೆಂಗಳೂರು : ನಟಿ ವಿಜಯಲಕ್ಷ್ಮಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಿಜಯಲಕ್ಷಿ ತಂಗಿ ಉಷಾರಾಣಿ ಕ್ಷಮೆ ಕೇಳಿರುವುದಾಗಿ ನಟ ರವಿ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ನಟಿ ವಿಜಯಲಕ್ಷ್ಮಿಗೆ ನಾನು ಕಿರುಕುಳ ಕೊಟ್ಟಿರುವುದಾಗಿ ಅವರು ಮತ್ತು ಅವರ ತಂಗಿ ಉಷಾರಾಣಿ ದೂರು ನೀಡಿದ್ದರು. ಈಗ ನಮ್ಮಿಂದ ತಪ್ಪಾಗಿದೆ, ಮನಸ್ಸಿಗೆ ಬೇಜಾರಾಗಿದ್ರೆ ಕ್ಷಮೆ ಇರಲಿ ಎಂದು ಮೂರು ಬಾರಿ ಮನವಿ ಮಾಡಿದ್ದಾರೆ. ಆದರೆ, ನನಗೆ ಬಹಳ ನೋವಾಗಿದೆ. ಅಪಪ್ರಚಾರ ಮಾಡಿ ಇವಾಗ ಕ್ಷಮೆ ಕೇಳಿದ್ರೆ ಏನು ಅರ್ಥವಿರುತ್ತದೆ. ಸುಳ್ಳು ಪ್ರಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು. ನಾನು ಅವರ ವಿರುದ್ಧ ದೂರು ನೀಡಿದ್ದೇನೆ. ನ್ಯಾಯಾಲಯದಿಂದ ಸಮನ್ಸ್ ಬರುತ್ತೆ, ಎದುರಿಸಲಿ. ನಾನು ಯಾವುದೇ ಕಾರಣಕ್ಕೂ ಕ್ಷಮಿಸಲ್ಲ ಎಂದು ನಟ ರವಿ ಪ್ರಕಾಶ್ ತಿಳಿಸಿದ್ದಾರೆ.
ಏನಿದು ಪ್ರಕರಣ? : ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ವಿಜಯಲಕ್ಷಿ, ನಟ ರವಿ ಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಕುರಿತು ವಿಜಯಲಕ್ಷಿ ಮತ್ತು ಅವರ ಸಹೋದರಿ ಉಷಾರಾಣಿ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು. ನಟ ರವಿ ಪ್ರಕಾಶ್ ಹಣಕಾಸು ನೆರವು ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಪದೇಪದೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದರು. ಇದಕ್ಕೆ ಪ್ರತಿಯಾಗಿ ರವಿ ಪ್ರಕಾಶ್ ಕೂಡ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.