ಬೆಂಗಳೂರು: " ನಾನು ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ. ಯಾವುದೇ ಪಕ್ಷ ಸೇರ್ಪಡೆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಮಾತನಾಡುವೆ" ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದರು. ಜೆಪಿ ನಗರದಲ್ಲಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, "ಬಿಜೆಪಿ ಅಥವಾ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ. ಸೂಕ್ತ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವೆ" ಎಂದರು.
"ಕೆಲವು ವಿಚಾರಗಳನ್ನು ಇಲ್ಲಿ ಮಾತನಾಡೋಕೆ ಆಗಲ್ಲ. ನಾನು ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ" ಎಂದು ರಾಜಕೀಯ ಪ್ರವೇಶದ ಬಗ್ಗೆ ಕಿಚ್ಚ ಸುದೀಪ್ ಮೊದಲ ಹೇಳಿಕೆ ನೀಡಿದರು. ಇದೇ ವೇಳೆ, ಬೆದರಿಕೆ ಪತ್ರದ ಬಗ್ಗೆ ಮಾತನಾಡಿ, "ಇದು ರಾಜಕೀಯದವರು ಮಾಡಿದ್ದಲ್ಲ. ಖಂಡಿತ ಇದನ್ನ ಚಿತ್ರರಂಗದವರೇ ಮಾಡಿಸಿದ್ದಾರೆ. ಅದು ಯಾರು ಅಂತ ಗೊತ್ತಿದ್ರೂ ಈಗ ಸೈಲೆಂಟಾಗಿ ಇರ್ತೀನಿ. ಅದಕ್ಕೆ ಹೇಗೆ ಉತ್ತರ ನೀಡಬೇಕು ಅಂತ ನನಗೆ ಗೊತ್ತಿದೆ. ಇವೆಲ್ಲ ಕಾನೂನಿನ ಪ್ರಕಾರ ಹೋದರೆ ಒಳ್ಳೆಯದು" ಎಂದರು.
"ಈ ಹಿಂದೆ ಯಾವ ಪಕ್ಷದಿಂದ ಕರೆದರೂ ನಾನು ಹೋಗಿ ಪ್ರಚಾರ ಮಾಡಿದ್ದೇನೆ. ಹಾಗಂತ ನಾನು ಆ ಪಕ್ಷಕ್ಕೆ ನೇರವಾಗಿ ಬೆಂಬಲ ನೀಡುತ್ತೇನೆ ಎಂದು ಅರ್ಥವಲ್ಲ. ಎಲ್ಲ ಪಕ್ಷಗಳ ಜೊತೆಗೂ ನಾನು ಉತ್ತಮ ಸಂಬಂಧ ಹೊಂದಿದ್ದೇನೆ" ಎಂದು ಹೇಳಿದರು.
ಯಾವ ಪಕ್ಷದ ಟಿಕೆಟ್ ಕೇಳಿಲ್ಲ: ಎಲ್ಲ ಪಕ್ಷದಲ್ಲೂ ನಮಗೆ ಆಪ್ತರಿದ್ದಾರೆ. ನನ್ನ ಕಷ್ಟಕಾಲದಲ್ಲಿ ಪರವಾಗಿ ನಿಂತವರಿದ್ದಾರೆ. ಅಂತಹವರ ಪರವಾಗಿ ಕೆಲವು ನಿಲುವುಗಳನ್ನು ತೆಗೆದುಕೊಳ್ಳುತ್ತೇನೆ. ಎಲ್ಲವನ್ನೂ ಈಗಲೇ ಹೇಳುವುದಿಲ್ಲ. ಯಾವ ಪಕ್ಷದಿಂದಲೂ ನಾನು ಯಾರ ಪರವಾಗಿ ಟಿಕೆಟ್ ಕೊಡಿ ಎಂದು ಕೂಡ ನಾನು ಕೇಳಿಲ್ಲ. ಬೆಂಗಳೂರಿನ ಚಿಕ್ಕಪೇಟೆಯಿಂದ ಜಾಕ್ ಮಂಜುಗೆ ಟಿಕೆಟ್ ಕೇಳಿದ್ದೇನೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟವಾಗಿ ಹೇಳಿದರು.
ರಾಜಕೀಯ ಪಕ್ಷಗಳು ಸಿನಿಮಾರಂಗದ ಸ್ಟಾರ್ ನಟರಿಗೆ ಆಹ್ವಾನ ನೀಡುವುದು ಸಹಜ. ನನ್ನನ್ನೂ ಕೆಲವರು ಕರೆದಿದ್ದಾರೆ. ಆದರೆ, ನಾನು ಯಾವ ಪಕ್ಷದ ಪರವಾಗಿ ನಿಂತಿಲ್ಲ. ನಟರನ್ನು ರಾಜಕೀಯಕ್ಕೆ ಕರೆಯುವುದರಲ್ಲಿ ವಿಶೇಷವೇನಿಲ್ಲ. ನನ್ನ ಕೈಯಲ್ಲಿ ಹಲವು ಸಿನಿಮಾಗಳಿವೆ. ಅದರಲ್ಲೇ ನಾನು ಬ್ಯುಸಿಯಾಗಿದ್ದೇನೆ ಎಂದು ಹೇಳಿದರು.
ನಾನು ಯಾರಿಗೂ ಹೆದರಲ್ಲ: ತಮಗೆ ಬಂದ ಬೆದರಿಕೆ ಪತ್ರದ ಬಗ್ಗೆ ಮಾತನಾಡಿ, ಸಿನಿಮಾ ರಂಗದವರೇ ಈ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಸೂಕ್ತ ಸಮಯದಲ್ಲಿ ಇದಕ್ಕೆ ಉತ್ತರ ನೀಡುವೆ. ನಾನು ಯಾರಿಗೂ ಹೆದರುವುದಿಲ್ಲ. ಪತ್ರಕ್ಕೆ ದಿಟ್ಟ ಉತ್ತರ ನೀಡುವೆ ಎಂದರು.
ಓದಿ: ಸುದೀಪ್ ಪಕ್ಷ ಸೇರ್ಪಡೆ ಬಗ್ಗೆ ಬಿಜೆಪಿ ಹರಡುತ್ತಿರುವುದು ಸುಳ್ಳು ಸುದ್ದಿ.. ಪ್ರಕಾಶ್ ರಾಜ್ ಟ್ವೀಟ್